ಏಕಕಾಲದಲ್ಲಿ ಇಬ್ಬರನ್ನು ವಿವಾಹವಾಗಲಿರುವ ಬ್ರೆಝಿಲ್ ಫುಟ್ಬಾಲ್ ಸ್ಟಾರ್ ರೊನಾಲ್ಡಿನೊ
ರಿಯೋ ಡಿಜನೈರೊ,ಮೇ 24: ಬ್ರೆಝಿಲ್ ಫುಟ್ಬಾಲ್ ಲೆಜೆಂಡ್ ರೊನಾಲ್ಡಿನೊ ಒಂದೇ ಸಮಯದಲ್ಲಿ ಇಬ್ಬರು ಯುವತಿಯರನ್ನು ವಿವಾಹವಾಗಲು ಸಜ್ಜಾ ಗಿದ್ದಾರೆ ಎಂದು ವರದಿಯಾಗಿದೆ.
ರೊನಾಲ್ಡಿನೊ ಆಗಸ್ಟ್‌ನಲ್ಲಿ ಇಬ್ಬರು ಪ್ರಿಯತಮೆಯರಾದ ಪ್ರಿಸಿಲ್ಲಾ ಹಾಗೂ ಬೀಟ್ರಿಝ್ ಸೌಝಾರನ್ನು ವಿವಾಹವಾಗಲು ನಿರ್ಧರಿಸಿದ್ದಾರೆ. 38ರ ಹರೆಯದ ರೊನಾಲ್ಡಿನೊ 2016ರಲ್ಲಿ ಬೀಟ್ರಿಝ್‌ರನ್ನು ಪ್ರೇಮಿಸತೊಡಗಿದ್ದರು. ಹಲವು ವರ್ಷಗಳ ಮೊದಲೇ ಪ್ರೀತಿಸುತ್ತಿದ್ದ ಪ್ರಿಸಿಲ್ಲಾರೊಂದಿಗೆ ಸ್ನೇಹ ಮುಂದುವರಿಸಿದ್ದರು. ಇಬ್ಬರು ಯುವತಿಯರು ಕಳೆದ ಡಿಸೆಂಬರ್‌ನಿಂದ ರಿಯೋ ಡಿಜನೈರೊ ಮ್ಯಾನ್ಶನ್‌ನಲ್ಲಿ ರೊನಾಲ್ಡಿನೊರೊಂದಿಗೆ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಬ್ರೆಝಿಲ್ ದಿನಪತ್ರಿಕೆಯ ಪ್ರಕಾರ, ರೊನಾಲ್ಡಿನೊ ರಿಯೋ ಡಿಜನೈರೊದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರೂ ಯುವತಿಯನ್ನು ಒಂದೇ ಸಮಯದಲ್ಲಿ ವಿವಾಹವಾಗಲಿದ್ದಾರೆ.
ಮಾಜಿ ವಿಶ್ವದ ವರ್ಷದ ಆಟಗಾರ ರೊನಾಲ್ಡಿನೊ ಕಳೆದ ವರ್ಷದ ಜನವರಿಯಲ್ಲಿ ಇಬ್ಬರು ಯುವತಿಯರ ಬಳಿ ಮದುವೆಯಾಗುವ ಪ್ರಸ್ತಾವವಿಟ್ಟಿದ್ದರು. ಇಬ್ಬರಿಗೂ ನಿಶ್ಚಿತಾರ್ಥ ಉಂಗುರವನ್ನು ನೀಡಿದ್ದರು.
ಈ ಪೀಳಿಗೆಯ ಓರ್ವ ಶ್ರೇಷ್ಠ ಆಟಗಾರನಾಗಿರುವ ರೊನಾಲ್ಡಿನೊ ಎರಡು ಬಾರಿ ಫಿಫಾ ವರ್ಷದ ಆಟಗಾರ ಪ್ರಶಸ್ತಿ ಹಾಗೂ ಬ್ಯಾಲನ್ ಡಿ’ಒರ್ ಪ್ರಶಸ್ತಿಗೆ ಭಾಜನರಾಗಿದ್ದರು.
ರೊನಾಲ್ಡಿನೊ 97 ಪಂದ್ಯಗಳಲ್ಲಿ ಬ್ರೆಝಿಲ್ ತಂಡವನ್ನು ಪ್ರತಿನಿಧಿಸಿದ್ದಾರೆ. 33 ಗೋಲುಗಳನ್ನು ಬಾರಿಸಿದ್ದಾರೆ. ಎರಡು ಬಾರಿ ಬ್ರೆಝಿಲ್ ಪರ ಫಿಫಾ ವಿಶ್ವಕಪ್‌ನ್ನು ಆಡಿದ್ದಾರೆ. 2002ರ ವಿಶ್ವಕಪ್ ವಿಜೇತ ಬ್ರೆಝಿಲ್ ತಂಡದ ಅವಿಭಾಜ್ಯ ಅಂಗವಾಗಿದ್ದರು.
1998ರಲ್ಲಿ ಬ್ರೆಝಿಲ್ ಫುಟ್ಬಾಲ್ ಕ್ಲಬ್ ಗ್ರಿಮಿಯೊ ಪರ ಆಡಿ ಹಿರಿಯರ ವಿಭಾಗದಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. 2003ರಲ್ಲಿ ಸ್ಪೇನ್ ಫುಟ್ಬಾಲ್ ಕ್ಲಬ್ ಬಾರ್ಸಿಲೋನದೊಂದಿಗೆ ಸಹಿ ಹಾಕಿದ್ದರು. 2003ರಿಂದ 2008ರ ತನಕ 145 ಪಂದ್ಯಗಳಲ್ಲಿ 70 ಗೋಲುಗಳನ್ನು ಬಾರಿಸಿದ್ದಾರೆ. ಫುಟ್ಬಾಲ್ ಕ್ಲಬ್‌ನಲ್ಲಿ 441 ಪಂದ್ಯಗಳನ್ನು ಆಡಿರುವ ರೊನಾಲ್ಡಿನೊ 167 ಗೋಲುಗಳನ್ನು ಬಾರಿಸಿದ್ದಾರೆ.