ರಶೀದ್ ಶ್ರೇಷ್ಠ ಪ್ರದರ್ಶನಕ್ಕೆ ಎಲ್ಲೆಡೆ ಶ್ಲಾಘನೆ
ಮುಂಬೈ, ಮೇ 26: ಅಫ್ಘಾನಿಸ್ತಾನದ 19ರ ಹರೆಯದ ಸ್ಪಿನ್ ಬೌಲರ್ ರಶೀದ್ ಖಾನ್ ಏಕಾಂಗಿ ಹೋರಾಟದ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಫೈನಲ್‌ಗೆ ಲಗ್ಗೆ ಇಡಲು ಪ್ರಮುಖ ಪಾತ್ರವಹಿಸಿದ್ದಾರೆ. ಖಾನ್ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದ್ದು, ಯುವ ಬೌಲರ್‌ಗೆ ನಮ್ಮ ದೇಶದ ಪೌರತ್ವ ನೀಡಬೇಕೆಂದು ಭಾರತದ ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ. ರಶೀದ್ ಖಾನ್ ಪ್ರದರ್ಶನವು ಭಾರತದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲವು ಕ್ರಿಕೆಟ್ ಅಭಿಮಾನಿಗಳು ರಶೀದ್‌ಗೆ ಭಾರತದ ಪೌರತ್ವ ನೀಡಬೇಕೆಂದು ಸಾಮಾಜಿಕ ಜಾಲತಾಣಗಳ ಮೂಲಕ ಆಗ್ರಹಿಸುತ್ತಿದ್ದಾರೆ. ಈ ಆಗ್ರಹಕ್ಕೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಾರೆ. ‘‘ನಮ್ಮ ಹೀರೊ ರಶೀದ್ ಖಾನ್ ಬಗ್ಗೆ ಅಫ್ಘಾನಿಸ್ತಾನ ಭಾರೀ ಹೆಮ್ಮೆ ಪಡುತ್ತಿದೆ. ನಮ್ಮ ಆಟಗಾರರಿಗೆ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿರುವ ನಮ್ಮ ಭಾರತದ ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುವೆನು. ನಮ್ಮ ದೇಶದ ಆಟಗಾರನಾಗಿ ರಶೀದ್ ನಮಗೆ ಸದಾ ನೆನಪಿನಲ್ಲಿರುತ್ತಾರೆ. ಅವರು ಕ್ರಿಕೆಟ್ ವಿಶ್ವಕ್ಕೆ ಆಸ್ತಿಯಾಗಿ ಉಳಿದಿದ್ದಾರೆ. ನಾವು ಅವರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ’’ ಎಂದು ಅಶ್ರಫ್ ಟ್ವೀಟ್ ಮಾಡಿದ್ದಾರೆ. ಹೈದರಾಬಾದ್ ತಂಡ ಕಳೆದ ಕಳೆದ ವರ್ಷದ ಐಪಿಎಲ್ ಆಟಗಾರರ ಹರಾಜಿನಲ್ಲಿ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್‌ರನ್ನು 40 ಮಿಲಿಯನ್ ರೂಪಾಯಿ ನೀಡಿ ಖರೀದಿಸಿತ್ತು. ಈ ವರ್ಷದ ಬಿಡ್ಡಿಂಗ್‌ನಲ್ಲಿ ಹೈದರಾಬಾದ್ ತಂಡ ರೈಟ್-ಟು-ಮ್ಯಾಚ್ ಕಾರ್ಡ್ ಬಳಸಿ 90 ಮಿಲಿಯನ್ ರೂಪಾಯಿಗೆ ರಶೀದ್‌ರನ್ನು ತನ್ನಲ್ಲೇ ಉಳಿಸಿಕೊಂಡಿತ್ತು.
2015ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಬಳಿಕ ರಶೀದ್ ಬಹುಬೇಗನೆ ಎತ್ತರಕ್ಕೆ ಏರಿದ್ದು ಫೆಬ್ರವರಿಯಲ್ಲಿ ಬಿಡುಗಡೆಯಾದ ಐಸಿಸಿ ಟ್ವೆಂಟಿ-20 ಹಾಗೂ ಏಕದಿನ ಮಾದರಿಯ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಪಡೆದಿದ್ದರು. ಈ ವರ್ಷದ ಐಪಿಎಲ್‌ನಲ್ಲಿ ಲೆಗ್ ಸ್ಪಿನ್ನರ್ ರಶೀದ್ ಉತ್ತಮ ಪ್ರದರ್ಶನ ನೀಡಲಿದ್ದಾರೆಂದು ಹೈದರಾಬಾದ್ ಕೋಚ್ ಟಾಮ್ ಮೂಡಿ ವಿಶ್ವಾಸ ವ್ಯಕ್ತಪಡಿಸಿದ್ದರು. ಕೋಚ್ ಮೂಡಿ ವಿಶ್ವಾಸವನ್ನು ಹುಸಿಗೊಳಿಸದ ರಶೀದ್ ಈ ವರ್ಷದ ಐಪಿಎಲ್‌ನಲ್ಲಿ 7ಕ್ಕಿಂತ ಕಡಿಮೆ ಇಕಾನಮಿ ರೇಟ್‌ನಲ್ಲಿ ಒಟ್ಟು 21 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಶುಕ್ರವಾರ ಕೋಲ್ಕತಾದಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕೇವಲ 10 ಎಸೆತದಲ್ಲಿ 34 ರನ್ ಸಿಡಿಸಿ ಹೈದರಾಬಾದ್ 7 ವಿಕೆಟ್‌ಗೆ 174 ರನ್ ಗಳಿಸಲು ನೆರವಾಗಿದ್ದ ರಶೀದ್ ಬೌಲಿಂಗ್‌ನಲ್ಲಿ 4 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 3 ವಿಕೆಟ್‌ಗಳನ್ನು ಉಡಾಯಿಸಿದ್ದರು. ಮಾತ್ರವಲ್ಲ ಒಂದು ರನೌಟ್ ಹಾಗೂ ಎರಡು ಕ್ಯಾಚ್‌ಗಳನ್ನು ಪಡೆದು ಫೀಲ್ಡಿಂಗ್‌ನಲ್ಲೂ ಮಿಂಚಿದ್ದರು. 14 ರನ್‌ನಿಂದ ಜಯ ಸಾಧಿಸಿರುವ ಹೈದರಾಬಾದ್ ಮುಂಬೈನಲ್ಲಿ ಮೇ 27 ರಂದು ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.