11ನೆ ಆವೃತ್ತಿಯ ಐಪಿಎಲ್ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್

Update: 2018-05-27 17:33 GMT

ಮುಂಬೈ, ಮೇ 27: ಹನ್ನೊಂದನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯದಲ್ಲಿ ರವಿವಾರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರನೆ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 179 ರನ್ ಗಳಿಸಬೇಕಿದ್ದ ಚೆನ್ನೈ ತಂಡ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 181 ರನ್ ಗಳಿಸಿ ಗೆಲುವಿನ ದಡ ಸೇರಿತು. ಆರಂಭಿಕ ದಾಂಡಿಗ ಶೇನ್ ವಾಟ್ಸನ್ ಔಟಾಗದೆ 117 ರನ್(57ಎ, 11ಬೌ, 8ಸಿ) ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಸುರೇಶ್ ರೈನಾ 32 ರನ್, ಅಂಬಟಿ ರಾಯುಡು ಔಟಾಗದೆ 16 ರನ್ , ಎಫ್‌ಡು ಪ್ಲೆಸಿಸ್ 10 ರನ್ ಗಳಿಸಿದರು.

   ಸನ್‌ರೈಸರ್ಸ್‌ 178/6: ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 178ರನ್ ಗಳಿಸಿತ್ತು.

  ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್‌ರೈಸರ್ಸ್‌ ಹೈದರಾಬಾದ್ ತಂಡ ನಾಯಕ ಕೇನ್ ವಿಲಿಯಮ್ಸನ್ 47 ರನ್(36ಎ, 5ಬೌ, 2ಸಿ) ಮತ್ತು ಯೂಸುಫ್ ಪಠಾಣ್ (ಔಟಾಗದೆ 45) ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.

 ಶಿಖರ್ ಧವನ್ 26ರನ್, ಶಾಕಿಬ್ ಅಲ್ ಹಸನ್ 23, ಬ್ರಾಥ್‌ವೈಟ್ 21 ರನ್ ಗಳಿಸಿದರು.

 ಸನ್‌ರೈಸರ್ಸ್‌ ಹೈದರಾಬಾದ್ ತಂಡ 1.5 ಓವರ್‌ಗಳಲ್ಲಿ 13 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ದಾಂಡಿಗ ಶ್ರೀವತ್ಸ ಗೋಸ್ವಾಮಿ(5) ರನೌಟಾದರು.

ಎರಡನೇ ವಿಕೆಟ್‌ಗೆ ಶಿಖರ್ ಧವನ್‌ಗೆ ನಾಯಕ ವಿಲಿಯಮ್ಸನ್ ಜೊತೆಯಾಗಿ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿದರು. ಇವರ ಜೊತೆಯಾಟದಲ್ಲಿ 51 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು.

ಶಿಖರ್ ಧವನ್ 26 ರನ್(25ಎ, 2ಬೌ,1ಸಿ) ಗಳಿಸಿದ್ದಾಗ ಅವರನ್ನು ಜಡೇಜ ಪೆವಿಲಿಯನ್‌ಗೆ ಅಟ್ಟಿದರು. ಕೇನ್ ವಿಲಿಯಮ್ಸನ್ ತಂಡದ ಸ್ಕೋರ್‌ನ್ನು 12.1 ಓವರ್‌ಗಳಲ್ಲಿ 101ಕ್ಕೆ ತಲುಪಿಸಿ ನಿರ್ಗಮಿಸಿದರು. ಆದರೆ ಅವರು 3 ರನ್‌ನಿಂದ ಅರ್ಧಶತಕ ವಂಚಿತಗೊಂಡರು

  ಶಾಕಿಬ್ ಅಲ್ ಹಸನ್ ಮತ್ತು ಯೂಸುಫ್ ಪಠಾಣ್ 4ನೇ ವಿಕೆಟ್‌ಗೆ 32 ರನ್ ಜಮೆ ಮಾಡಿದರು. ಶಾಕಿಬ್ ಔಟಾದ ಬಳಿಕ ದೀಪಕ್ ಹೂಡಾ(3) ಕ್ರೀಸ್‌ಗೆ ಆಗಮಿಸಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆಗ ತಂಡದ ಸ್ಕೋರ್ 17 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 144 ಆಗಿತ್ತು.

ಆರನೇ ವಿಕೆಟ್‌ಗೆ ಪಠಾಣ್ ಮತ್ತು ಬ್ರಾಥ್‌ವೈಟ್ ಜೊತೆಯಾಗಿ 3 ಓವರ್‌ಗಳಲ್ಲಿ 34 ರನ್ ಸೇರಿಸಿದರು.

ಚೆನ್ನೈ ತಂಡದ ಲುಂಗಿ ಗಿಡಿ, ಶಾರ್ದುಲ್ ಠಾಕೂರ್, ಕೆ.ವಿ.ಶರ್ಮಾ, ಡ್ವೇಯ್ನ ಬ್ರಾವೊ ಮತ್ತು ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News