ಆಂಗ್ಲರನ್ನು ಬಗ್ಗು ಬಡಿದ ಪಾಕ್
ಲಾರ್ಡ್ಸ್, ಮೇ 27: ಇಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಗೆಲುವಿಗೆ 2ನೇ ಇನಿಂಗ್ಸ್‌ನಲ್ಲಿ ಗೆಲುವಿಗೆ 64 ರನ್ ಗಳಿಸಬೇಕಿದ್ದ ಪಾಕಿಸ್ತಾನ ತಂಡ 12.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 66 ರನ್ ಗಳಿಸಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ 2 ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆರಂಭಿಕ ದಾಂಡಿಗ ಅಝರ್ ಅಲಿ 4 ರನ್ ಗಳಿಸಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆದರೆ ಇಮಾಮ್ ಉಲ್ ಹಕ್ ಔಟಾಗದೆ 18ರನ್ ಮತ್ತು ಹಾರೀಸ್ ಸೊಹೈಲ್ ಔಟಾಗದೆ 39 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಐದು ದಿನಗಳ ಪಂದ್ಯ ನಾಲ್ಕೇ ದಿನಗಳಲ್ಲಿ ಮುಗಿಯಿತು.
ಮೂರನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 78 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 235 ರನ್ ಗಳಿಸಿತ್ತು. ಜೋಸ್ ಬಟ್ಲರ್ ಔಟಾಗದೆ 66 ರನ್ ಮತ್ತು ಮೊದಲ ಟೆಸ್ಟ್ ಆಡುತ್ತಿರುವ ಡಾಮ್ ಬೆಸ್ 55 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು. ಬಟ್ಲರ್ ಮತ್ತು ಬೆಸ್ ಮುರಿಯದ ಜೊತೆಯಾಟದಲ್ಲಿ 125 ರನ್‌ಗಳನ್ನು ಸೇರಿಸಿದ್ದರು.
ನಾಲ್ಕನೇ ದಿನದಾಟ ಮುಂದುವರಿಸಿದ ಬಟ್ಲರ್ ಮತ್ತು ಬೆಸ್ ತಂಡದ ಹೀನಾಯ ಸೋಲನ್ನು ತಪ್ಪಿಸಲು ವಿಫಲರಾದರು. ಬಟ್ಲರ್ ನಿನ್ನೆಯ ಮೊತ್ತಕ್ಕೆ 1 ರನ್ ಸೇರಿಸಿ ಔಟಾದರು. ಬೆಸ್ ಕೊನೆಯಲ್ಲಿ ಔಟಾಗುವುದರೊಂದಿಗೆ ಇಂಗ್ಲೆಂಡ್‌ನ ಎರಡನೇ ಇನಿಂಗ್ಸ್ ಮುಕ್ತಾಯಗೊಂಡಿತು. 27 ನಿಮಿಷಗಳ ಆಟದಲ್ಲಿ 7 ರನ್ ಸೇರುವಷ್ಟರಲ್ಲಿ ಇಂಗ್ಲೆಂಡ್‌ನ ಇನಿಂಗ್ಸ್ ಮುಕ್ತಾಯಗೊಂಡಿತು.
ಮುಹಮ್ಮದ್ ಆಮಿರ್ (36ಕ್ಕೆ 4), ಮುಹಮ್ಮದ್ ಅಬ್ಬಾಸ್(41ಕ್ಕೆ 4) ಮತ್ತು ಮತ್ತು ಶದಾಬ್ ಖಾನ್(63ಕ್ಕೆ 2) ದಾಳಿಗೆ ಸಿಲುಕಿದ ಇಂಗ್ಲೆಂಡ್‌ನ ಅಂತಿಮ 4 ವಿಕೆಟ್‌ಗಳು ಕೇವಲ 7 ರನ್‌ಗೆ ಪತನಗೊಂಡವು.
ಸಂಕ್ಷಿಪ್ತ ಸ್ಕೊರ್ ವಿವರ
►ಇಂಗ್ಲೆಂಡ್ ಮೊದಲ ಇನಿಂಗ್ಸ್ 184, ಪಾಕಿಸ್ತಾನ ಮೊದಲ ಇನಿಂಗ್ಸ್ 363/9
►ಇಂಗ್ಲೆಂಡ್ ಎರಡನೇ ಇನಿಂಗ್ಸ್ 242(ರೂಟ್ 68, ಬಟ್ಲರ್67, ಬೆಸ್ 57;ಮುಹಮ್ಮದ್ ಆಮಿರ್ 36ಕ್ಕೆ 4, ಮುಹಮ್ಮದ್ ಅಬ್ಬಾಸ್41ಕ್ಕೆ 4) ►ಪಾಕಿಸ್ತಾನ ಎರಡನೇ ಇನಿಂಗ್ಸ್ 12.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 66(ಹಾರಿಸ್ ಸೊಹೈಲ್ ಔಟಾಗದೆ 39; ಆ್ಯಂಡರ್ಸನ್ 12ಕ್ಕೆ 1).
ಪಂದ್ಯಶ್ರೇಷ್ಠ: ಮುಹಮ್ಮದ್ ಅಬ್ಬಾಸ್