ಮೊದಲ ವಿಕೆಟ್ ಗೆ ಭಾರತದ 4 ಬ್ಯಾಟ್ಸ್ ಮ್ಯಾನ್ ಗಳು 408 ರನ್ ಬಾರಿಸಿದಾಗ...!
ಚಿತ್ತಗಾಂಗ್, ಮೇ 28: ಅಗ್ರಸರದಿಯ ನಾಲ್ವರು ದಾಂಡಿಗರಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಸೀಮ್ ಜಾಫರ್ ಮತ್ತು ದಿನೇಶ್ ಕಾರ್ತಿಕ್ ಬಾಂಗ್ಲಾದೇಶ ತಂಡದ ವಿರುದ್ಧ ದಾಖಲಿಸಿದ ಶತಕಗಳ ದಾಖಲೆಗೆ 11 ವರ್ಷ ತುಂಬಿದೆ.
2007,ಮೇ 26ರಂದು ಢಾಕಾದಲ್ಲಿ ನಾಲ್ವರು ದಾಂಡಿಗರು ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದರು. ಎರಡು ಟೆಸ್ಟ್‌ಗಳ ಸರಣಿಯ ಅಂತಿಮ ಟೆಸ್ಟ್‌ನಲ್ಲಿ 1ರಿಂದ 4ರ ಕ್ರಮಾಂಕದ ತನಕದ ದಾಂಡಿಗರಾದ ಸಚಿನ್, ದ್ರಾವಿಡ್, ಜಾಫರ್, ಕಾರ್ತಿಕ್ ಶತಕಗಳ ಕೊಡುಗೆ ನೀಡಿರುವುದು ಹೊಸ ದಾಖಲೆಯಾಗಿತ್ತು.
ಮೊದಲ ಟೆಸ್ಟ್ ಚಿತ್ತಗಾಂಗ್‌ನಲ್ಲಿ ಡ್ರಾದಲ್ಲಿ ಕೊನೆಗೊಂಡಿತ್ತು. ಸರಣಿ ಗೆಲುವಿಗೆ ಎರಡನೇ ಟೆಸ್ಟ್‌ನಲ್ಲಿ ಉಭಯ ತಂಡಗಳು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಪರ ಇನಿಂಗ್ಸ್ ಆರಂಭಿಸಿದ ದಿನೇಶ್ ಕಾರ್ತಿಕ್ ಮತ್ತು ವಸೀಮ್ ಜಾಫರ್ ಮೊದಲ ವಿಕೆಟ್‌ಗೆ ಜೊತೆಯಾಟದಲ್ಲಿ ವಿಕೆಟ್ ನಷ್ಟವಿಲ್ಲದೆ 175 ರನ್ ಸೇರಿಸಿದರು. ಪ್ರತಿಕೂಲ ವಾತಾವರಣದಲ್ಲಿ ಕಾರ್ತಿಕ್ ಗಾಯಗೊಂಡು ಕ್ರೀಡಾಂಗಣದಿಂದ ಹೊರ ನಡೆದರು.ಆದರೆ ಜಾಫರ್ ಅವರು ಡ್ರಾವಿಡ್ ಅವರೊಂದಿಗೆ ಜೊತೆಯಾಟ ಮುಂದುವರಿಸಿ ಶತಕ ಪೂರ್ಣಗೊಳಿಸಿದರು.
ಜಾಫರ್ 138 ರನ್ ಗಳಿಸಿ ಹೊರ ನಡೆದರು. ತೆರವಾದ ಸ್ಥಾನವನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ತುಂಬಿದರು. ದ್ರಾವಿಡ್ ಮತ್ತು ತೆಂಡುಲ್ಕರ್ ಶತಕಗಳನ್ನು ದಾಖಲಿಸಿದರು. ದ್ರಾವಿಡ್ 129 ರನ್ ದಾಖಲಿಸಿ ಔಟಾದರು. ಸಚಿನ್ ತೆಂಡುಲ್ಕರ್ 122 ರನ್ ಗಳಿಸಿ ಔಟಾಗದೆ ಉಳಿದರು. ದಿನೇಶ್ ಕಾರ್ತಿಕ್ ಮತ್ತೆ ಕ್ರೀಸ್‌ಗೆ ಆಗಮಿಸಿ 129 ರನ್ ಗಳಿಸಿ ಔಟಾದರು. ಭಾರತ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟದಲ್ಲಿ 610 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಬಾಂಗ್ಲಾದೇಶ ಭಾರತದ ಬೆಟ್ಟದಂತಹ ಸವಾಲನ್ನು ಬೆನ್ನಟ್ಟಲು ಸಾಧ್ಯವಾಗದೆ ಮೊದಲ ಇನಿಂಗ್ಸ್‌ನಲ್ಲಿ 118 ರನ್ ಮತ್ತು 2ನೇ ಇನಿಂಗ್ಸ್‌ನಲ್ಲಿ 253 ರನ್ ಗಳಿಸಿತು. ಭಾರತ ಇನ್ನಿಂಗ್ಸ್ ಹಾಗೂ 239 ರನ್‌ಗಳ ಜಯ ಗಳಿಸಿ 2 ಟೆಸ್ಟ್‌ಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿತು. ಏಳು ವಿಕೆಟ್ ಉಡಾಯಿಸಿದ ವೇಗಿ ಝಹೀರ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.