×
Ad

ಭಾರತದ ಅಗ್ರಮಾನ್ಯ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ನಿವೃತ್ತಿ

Update: 2018-05-30 18:36 IST

ಹೊಸದಿಲ್ಲಿ, ಮೇ 30: ಪದ್ಮಶ್ರೀ ಪ್ರಶಸ್ತಿ ವಿಜೇತ, ಭಾರತದ ಅಗ್ರಮಾನ್ಯ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಕ್ರೀಡೆಯಿಂದ ಬುಧವಾರ ನಿವೃತ್ತಿಯಾಗಿದ್ದಾರೆ.

ಸುಮಾರು 15 ವರ್ಷಗಳ ಕಾಲ ಉನ್ನತ ಮಟ್ಟದ ಟೂರ್ನಿಗಳಲ್ಲಿ ಸ್ಪರ್ಧಿಸಿರುವ ಕನ್ನಡಿಗ ವಿಕಾಸ್ ಗೌಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಡಿಸ್ಕಸ್ ಎಸೆತದ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊತ್ತ ಮೊದಲ ಪುರುಷ ಅಥ್ಲೀಟ್ ಎನಿಸಿಕೊಂಡಿದ್ದರು. ಕ್ರೀಡೆಗೆ ನೀಡಿದ ಅಪೂರ್ವ ಕೊಡುಗೆಗೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ನಾಲ್ಕು ಬಾರಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವ 34ರ ಹರೆಯದ ವಿಕಾಸ್ ನಿವೃತ್ತಿ ನಿರ್ಧಾರ ಅಚ್ಚರಿ ತಂದಿಲ್ಲ. ವಿಕಾಸ್ ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ ಬಳಿಕ ಯಾವುದೇ ಪ್ರಮುಖ ಅಂತರ್‌ರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿರಲಿಲ್ಲ.

ಭಾರತ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ)ತನ್ನ ಟ್ವಿಟರ್ ಪೇಜ್‌ನಲ್ಲಿ ವಿಕಾಸ್ ನಿವೃತ್ತಿಯ ವಿಚಾರವನ್ನು ಪ್ರಕಟಿಸಿತ್ತು. ವಿಕಾಸ್ ಎಎಫ್‌ಐಗೆ ಪತ್ರ ಬರೆದು ತನ್ನ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದ್ದರು.

ಮೈಸೂರಿನಲ್ಲಿ 1983, ಜು.5 ರಂದು ಜನಿಸಿರುವ ವಿಕಾಸ್ ಗೌಡ ಕುಟುಂಬ ಅಮೆರಿಕದ ಮೇರಿಲ್ಯಾಂಡ್‌ಗೆ ವಾಸ್ತವ್ಯ ಬದಲಾಯಿಸಿತ್ತು. ಆಗ ವಿಕಾಸ್‌ಗೆ ಆರು ವರ್ಷ ವಯಸ್ಸಾಗಿತ್ತು. ವಿಕಾಸ್ ಅವರ ತಂದೆ ಶಿವೆ ಮಾಜಿ ಅಥ್ಲೀಟ್ ಹಾಗೂ 1988ರ ಒಲಿಂಪಿಕ್ಸ್‌ನಲ್ಲಿ ರಾಷ್ಟ್ರೀಯ ಕೋಚ್ ಆಗಿದ್ದರು.

ಭಾರತದ ಪ್ರಸಿದ್ಧ ಅಥ್ಲೀಟ್‌ಗಳ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದ ವಿಕಾಸ್ 2012ರಲ್ಲಿ 66.28 ಮೀ.ದೂರಕ್ಕೆ ಡಿಸ್ಕಸ್‌ನ್ನು ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. 2013 ಹಾಗೂ 2015ರ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 2010ರ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಹಾಗೂ 2014ರ ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. 2010 ಹಾಗೂ 2014ರ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಕ್ರಮವಾಗಿ ಕಂಚು ಹಾಗೂ ಬೆಳ್ಳಿ ಜಯಿಸಿದ್ದರು.

ವಿಕಾಸ್ ಗೌಡ 2004,2008,2012 ಹಾಗೂ 2016ರ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು. ನಾಲ್ಕು ಒಲಿಂಪಿಕ್ಸ್‌ಗಳ ಪೈಕಿ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಮಾತ್ರ ಫೈನಲ್ ಸುತ್ತಿಗೆ ತಲುಪಿದ್ದರು.

ಇಂಡೋನೇಷ್ಯಾದಲ್ಲಿ ಏಷ್ಯನ್ ಗೇಮ್ಸ್ ಆರಂಭವಾಗಲು ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ವಿಕಾಸ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ವಿಕಾಸ್ ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ಕೊನೆಗೊಂಡಿದ್ದ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸದೇ ಇರುವವರಿಗೆ ಬಹುಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಎಎಫ್‌ಐ ಕಠಿಣ ನಿಯಮ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News