×
Ad

ಪಾಕ್: ಪ್ರಾಂತದೊಂದಿಗೆ ಬುಡಕಟ್ಟು ಪ್ರದೇಶ ವಿಲೀನ; ಮಸೂದೆಗೆ ಅಧ್ಯಕ್ಷರ ಸಹಿ

Update: 2018-05-31 22:26 IST

ಇಸ್ಲಾಮಾಬಾದ್, ಮೇ 31: ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬುಡಕಟ್ಟು ಪ್ರದೇಶವನ್ನು ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಪ್ರಾಂತ ಖೈಬರ್-ಪಖ್ತೂಂಖ್ವ ಜೊತೆಗೆ ವಿಲೀನಗೊಳಿಸುವ ಮಹತ್ವದ ಸಂವಿಧಾನ ತಿದ್ದುಪಡಿಯೊಂದಕ್ಕೆ ದೇಶದ ಅಧ್ಯಕ್ಷ ಮಮ್ನೂನ್ ಹುಸೈನ್ ಗುರುವಾರ ಸಹಿ ಹಾಕಿದ್ದಾರೆ. ಇದರೊಂದಿಗೆ 150 ವರ್ಷಗಳ ಹಳೆಯ ಬ್ರಿಟಿಶ್ ವ್ಯವಸ್ಥೆಯೊಂದು ಕೊನೆಗೊಂಡಂತಾಗಿದೆ.

ಮಸೂದೆಯನ್ನು ಅಧ್ಯಕ್ಷರಿಗೆ ಅಂಗೀಕಾರಕ್ಕಾಗಿ ಕಳುಹಿಸುವ ಮೊದಲು, ನ್ಯಾಶನಲ್ ಅಸೆಂಬ್ಲಿ, ಸೆನೆಟ್ ಮತ್ತು ಖೈಬರ್-ಪಖ್ತೂಂಖ ಪ್ರಾಂತದ ಶಾಸನ ಸಭೆಯು ಮಸೂದೆಗೆ ಅಂಗೀಕಾರ ನೀಡಿದ್ದವು.

ಮಸೂದೆಗೆ ಸಹಿ ಹಾಕಿದ ಬಳಿಕ, ಕೇಂದ್ರಾಡಳಿತದ ಬುಡಕಟ್ಟು ಪ್ರದೇಶಗಳು (ಎಫ್‌ಎಟಿಎ) ಮತ್ತು ಖೈಬರ್-ಪಖ್ತೂಂಖ ರಾಜ್ಯದ ಜನರನ್ನು ಅಧ್ಯಕ್ಷರು ಅಭಿನಂದಿಸಿದರು ಎಂದು ‘ಜಿಯೋ ಟಿವಿ’ ವರದಿ ಮಾಡಿದೆ.

ಅರೆ ಸ್ವಾಯತ್ತ ಬುಡಕಟ್ಟು ಪ್ರದೇಶವನ್ನು ಬ್ರಿಟಿಷ್ ವಸಾಹತುಶಾಹಿಗಳು, ಅಫ್ಘಾನಿಸ್ತಾನದೊಂದಿಗೆ ನೇರ ಸಂಘರ್ಷವನ್ನು ತಪ್ಪಿಸಲು ‘ತಡೆ’ಯಾಗಿ ನಿರ್ಮಿಸಿದ್ದರು. ಅಫ್ಘಾನಿಸ್ತಾನದ ಗಡಿಯುದ್ದಕ್ಕೂ ಇರುವ ಈ ವಲಯದಲ್ಲಿ 7 ಜಿಲ್ಲೆಗಳಿವೆ. ಅವುಗಳೆಂದರೆ- ಬಜೌರ್, ಖೈಬರ್, ಕುರ್ರಮ್, ಮುಹ್ಮಂಡ್, ಉತ್ತರ ವಝೀರಿಸ್ತಾನ್, ಒರಕ್‌ಝಾಯ್ ಮತ್ತು ದಕ್ಷಿಣ ವಝೀರಿಸ್ತಾನ್.

ಈ 7 ಗುಡ್ಡಗಾಡು ಜಿಲ್ಲೆಗಳಲ್ಲಿ ಸುಮಾರು 80 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಅವರ ಪೈಕಿ ಹೆಚ್ಚಿನವರು ಪಶ್ತೂನ್ ಬುಡಕಟ್ಟು ಜನರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News