ಮುಶರ್ರಫ್ ಗುರುತು ಚೀಟಿ, ಪಾಸ್‌ಪೋರ್ಟ್ ರದ್ದು: ಸರಕಾರ ಸೂಚನೆ

Update: 2018-05-31 17:24 GMT

ಇಸ್ಲಾಮಾಬಾದ್, ಮೇ 31: ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್‌ರ ರಾಷ್ಟ್ರೀಯ ಗುರುತು ಕಾರ್ಡ್ (ಎನ್‌ಐಸಿ) ಮತ್ತು ಪಾಸ್‌ಪೋರ್ಟ್ ತಡೆಹಿಡಿಯುವಂತೆ ಪಾಕಿಸ್ತಾನ ಸರಕಾರ ಇಂದು ಆಂತರಿಕ ಸಚಿವಾಲಯಕ್ಕೆ ಸೂಚನೆ ನೀಡಿದೆ.

ವಿಶೇಷ ನ್ಯಾಯಾಲಯವೊಂದರ ಆದೇಶದಂತೆ, ದುಬೈಯಲ್ಲಿ ನೆಲೆಸಿರುವ ಮಾಜಿ ಸೇನಾ ಮುಖ್ಯಸ್ಥನ ಪ್ರಯಾಣವನ್ನು ನಿರ್ಬಂಧಿಸಲು ಮತ್ತು ಅವರಿಗೆ ಲಭಿಸುತ್ತಿರುವ ಇತರ ಹಲವು ಸವಲತ್ತುಗಳನ್ನು ತಡೆಹಿಡಿಯಲು ಸರಕಾರ ಮುಂದಾಗಿದೆ.

ತನ್ನ ವಿರುದ್ಧದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗಲು ಮುಶರ್ರಫ್ ವಿಫಲರಾದ ಹಿನ್ನೆಲೆಯಲ್ಲಿ, ನ್ಯಾಯಾಲಯ ಈ ಆದೇಶ ನೀಡಿದೆ.

ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಶನಲ್ ಡಾಟಾ ಬೇಸ್ ಆ್ಯಂಡ್ ರಿಜಿಸ್ಟ್ರೇಶನ್ ಅಥಾರಿಟಿ ಹಾಗೂ ವಲಸೆ ಮತ್ತು ಪಾಸ್‌ಪೋರ್ಟ್ ನಿರ್ದೇಶನಾಲಯಕ್ಕೆ ಸೂಚನೆಗಳನ್ನು ನೀಡಲಾಗಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಈ ಕ್ರಮಗಳು ಜಾರಿಗೆ ಬಂದರೆ, ಮುಶರ್ರಫ್‌ಗೆ ವಿದೇಶ ಪ್ರಯಾಣ ಮಾಡಲು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

‘‘ಇದರಿಂದ ಅವರಿಗೆ ಪಾಕಿಸ್ತಾನ ಮತ್ತು ವಿದೇಶಗಳಲ್ಲಿರುವ ತನ್ನ ಆಸ್ತಿಗಳನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಕೂಡ ಸಾಧ್ಯವಾಗುವುದಿಲ್ಲ’’ ಎಂದು ಮೂಲವೊಂದನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News