ಮೌಂಟ್ ಎವರೆಸ್ಟ್‌ನಿಂದ 8.5 ಟನ್ ತ್ಯಾಜ್ಯ ಸಂಗ್ರಹಿಸಿದ ಚೀನಾ
Update: 2018-06-01 23:31 IST
ಬೀಜಿಂಗ್, ಜೂ. 1: ಚೀನಾವು ಎಪ್ರಿಲ್‌ನಿಂದೀಚೆಗೆ ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಿಂದ 8.5 ಟನ್ ತ್ಯಾಜ್ಯವನ್ನು ಸಂಗ್ರಹಿಸಿದೆ ಎಂದು ಚೀನಾ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಗುರುವಾರ ವರದಿ ಮಾಡಿದೆ.
8,850 ಮೀಟರ್ ಎತ್ತರದ ಶಿಖರವನ್ನು ಏರಲು ಜಗತ್ತಿನ ಎಲ್ಲೆಡೆಯಿಂದ ಬರುವ ನೂರಾರು ಉತ್ಸಾಹಿಗಳು ಪ್ರತಿ ವರ್ಷ ಟನ್‌ಗಟ್ಟಳೆ ತ್ಯಾಜ್ಯವನ್ನು ಬಿಟ್ಟು ಹೋಗುತ್ತಾರೆ.
ಟಿಬೆಟ್ ಪರ್ವತಾರೋಹಣ ಸಂಸ್ಥೆಯ ಅಧಿಕಾರಿಗಳು ಕೈಗೆತ್ತಿಕೊಂಡಿರುವ ಶುದ್ಧೀಕರಣ ಯೋಜನೆಯನ್ವಯ, 30 ಮಂದಿಯ ತಂಡವೊಂದು ಸುಮಾರು 5.2 ಟನ್ ಮನೆಬಳಕೆಯ ತ್ಯಾಜ್ಯ, 2.3 ಟನ್ ಮಾನವ ಮಲ ಮತ್ತು ಒಂದು ಟನ್ ಪರ್ವತಾರೋಹಣ ವಸ್ತುಗಳ ತ್ಯಾಜ್ಯವನ್ನು ಸಂಗ್ರಹಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.