×
Ad

ಮಂಗಳವಾರದ ಶೃಂಗಸಭೆಗೆ ಕ್ಷಣಗಣನೆ ಆರಂಭ: ಟ್ರಂಪ್, ಕಿಮ್ ಜಾಂಗ್ ಸಿಂಗಾಪುರಕ್ಕೆ ಆಗಮನ

Update: 2018-06-10 23:15 IST

ಸಿಂಗಾಪುರ,ಜೂ.10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ರವಿವಾರ ಸಿಂಗಾಪುರಕ್ಕೆ ಆಗಮಿಸಿದ್ದಾರೆ. ಉ.ಕೊರಿಯದ ಅಣ್ವಸ್ತ್ರ ಕಾರ್ಯಕ್ರಮದಿಂದಾಗಿ ಉಭಯದೇಶಗಳ ನಡುವೆ ದೀರ್ಘಕಾಲದಿಂದ ತಲೆದೋರಿರುವ ಸಂಘರ್ಷಾವಸ್ಥೆಯನ್ನು ನಿವಾರಿಸಲು ಈ ಇಬ್ಬರು ನಾಯಕರ ಶೃಂಗಸಭೆ ನೆರವಾಗಲಿದೆಯೆಂದು ನಿರೀಕ್ಷಿಸಲಾಗಿದೆ.

ಕಿಮ್ ಜಾಂಗ್ ಉನ್ ಅವರನ್ನು ಹೊತ್ತ ಜೆಟ್ ವಿಮಾನವು ಇಂದು ಮಧ್ಯಾಹ್ನ ಸಿಂಗಾಪುರ ವಿಮಾನನಿಲ್ದಾಣದಲ್ಲಿ ಬಂದಿಳಿಯಿತು. ಕಿಮ್‌ ಜಾಂಗ್ ಉನ್ ಹಾಗೂ ಸಿಂಗಾಪುರದ ವಿದೇಶಾಂಗ ಸಚಿವರು ಪರಸ್ಪರ ಹಸ್ತಲಾಘವ ಮಾಡುತ್ತಿರುವ ಛಾಯಾಚಿತ್ರಗಳನ್ನು ಸಿಂಗಾಪುರ ಆಡಳಿತವು ತಕ್ಷಣವೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ವಿಮಾನನಿಲ್ದಾಣದಿಂದ ಕಿಮ್‌ಜೊಂಗ್ ಅವರನ್ನು ಬಿಗುಭದ್ರತೆಯಲ್ಲಿ ನಗರದ ಪ್ರತಿಷ್ಠಿತ ರೆಗಿಸ್ ಹೊಟೇಲ್‌ಗೆ ಕರೆದೊಯ್ಯಲಾಯಿತು. ಕಿಮ್ ಜಾಂಗ್ ಆಗಮನದ ಕೆಲವೇ ತಾಸುಗಳ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ವಿಶೇಷ ಏರ್‌ಫೋರ್ಸ್‌ವನ್ ವಿಮಾನದ ಮೂಲಕ ಸಿಂಗಾಪುರದ ಪಾಯಾ ಲೇಬರ್ ವಿಮಾನನಿಲ್ದಾಣದಲ್ಲಿ ಬಂದಿಳಿದರು.

 ಟ್ರಂಪ್ ಹಾಗೂ ಕಿಮ್ ಜಾಂಗ್ ಮಂಗಳವಾರ ಸೆಂಟೊಸಾ ವಿಹಾರ ದ್ವೀಪದಲ್ಲಿ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಹಾಗೂ ಉತ್ತರ ಕೊರಿಯ ನಾಯಕನ ನಡುವೆ ನಡೆಯಲಿರುವ ಈ ಚೊಚ್ಚಲ ಮಾತುಕತೆಯ ಫಲಿತಾಂಶದ ಬಗ್ಗೆ ಇಡೀ ಜಗತ್ತೇ ಅತ್ಯಂತ ಕಾತರದಿಂದ ಕಾಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News