ವಿಶ್ವ ಚಾಂಪಿಯನ್ ಪಟ್ಟದ ಮೇಲೆ ಸ್ಪೇನ್, ಪೋರ್ಚುಗಲ್ ಕಣ್ಣು

Update: 2018-06-11 18:08 GMT

ಮಾಸ್ಕೊ, ಜೂ.11: ಮಾಜಿ ವಿಶ್ವಕಪ್ ಚಾಂಪಿಯನ್ ಸ್ಪೇನ್ ಮತ್ತು ಯುರೋ ಚಾಂಪಿಯನ್ ಪೋರ್ಚುಗಲ್ ರಶ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಚಾಂಪಿಯನ್‌ಪಟ್ಟ ಕೈವಶ ಮಾಡುವ ಪ್ರಯತ್ನ ನಡೆಸಲಿವೆ.

  2010ರ ವಿಶ್ವ ಚಾಂಪಿಯನ್ ಸ್ಪೇನ್ ಮತ್ತು 2016ರ ಯುರೋಪಿಯನ್ ಚಾಂಪಿಯನ್ ಪೋರ್ಚುಗಲ್ ತಂಡಗಳು ವಿಶ್ವಕಪ್‌ನ ಗ್ರೂಪ್ ಹಂತದ ಸ್ಪರ್ಧೆಗೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇರಾನ್ ಮತ್ತು ಮೊರಾಕ್ಕೊ ಈ ಗುಂಪಿನಲ್ಲಿರುವ ಇತರ ತಂಡಗಳು. ಸೋಚಿಯ ಫಿಶ್ಟ್ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ಜೂ.15ರಂದು ನಡೆಯಲಿರುವ ಪಂದ್ಯದಲ್ಲಿ ಸ್ಪೇನ್ ಹಾಗೂ ಪೋರ್ಚುಗಲ್ ಹಣಾಹಣಿ ನಡೆಸಲಿವೆೆ. 2010ರ ವಿಶ್ವ ಚಾಂಪಿಯನ್ ಸ್ಪೇನ್ ತಂಡ 2014ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ವಿಶ್ವಕಪ್‌ನ ಗ್ರೂಪ್ ಹಂತದ ಸ್ಪರ್ಧೆಯಲ್ಲೇ ಸೋತು ನಿರ್ಗಮಿಸಿತ್ತು. ಆಗ ವಿನ್ಸೆಂಟ್ ಡೆಲ್ ಬಾಸ್ಕೊ ತಂಡದ ಕೋಚ್ ಆಗಿದ್ದರು. 2016ರ ಯುರೋ ಕಪ್‌ನಲ್ಲಿ ಸ್ಪೇನ್ ಸಾಧನೆ ಚೆನ್ನಾಗಿರಲಿಲ್ಲ. ವಿಶ್ವಕಪ್ ಮತ್ತು ಯುರೋ ಕಪ್‌ನ್ನು ಉಳಿಸಿಕೊಳ್ಳುವಲ್ಲಿ ಸ್ಪೇನ್ ವಿಫಲಗೊಂಡಿತ್ತು.

 ಸ್ಪೇನ್ ತಂಡದ ಹೊಸ ಕೋಚ್ ಆಗಿ ಜುಲೆನ್ ಲೊಪೆಟೆಗುಯ್ ನೇಮಕಗೊಂಡ ಬಳಿಕ ಸ್ಪೇನ್ ಗೆಲುವಿನ ಅಜೇಯ ಓಟ ಮುಂದುವರಿಸಿದೆ. ಆಡಿರುವ 19 ಪಂದ್ಯಗಳಲ್ಲಿ 13ರಲ್ಲಿ ಜಯ ಗಳಿಸಿತ್ತು. 6 ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.

  ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ. ಆ್ಯಂಡ್ರೆ ಇನಿಯೆಸ್ತ, ಸೆರ್ಗಿಯೊ ರಾಮೊಸ್, ಡೇವಿಡ್ ಸಿಲ್ವಾ ಮತ್ತು ಪೆಪೆ ರೆಯ್ನಾ 2008ರಲ್ಲಿ ಯುರೋ ಕಪ್ ಜಯಿಸಿರುವ ತಂಡದ ಸದಸ್ಯರಾಗಿದ್ದಾರೆ. ಯುವ ಆಟಗಾರರಾದ ಮಾರ್ಕೊ ಅಸೆನ್ಸಿಯೊ ಮತ್ತು ಅಲ್ವೆರೊ ಒಡ್ರಿಯೊರೊಲಾ ಈಗಾಗಲೇ ಕ್ಲಬ್ ತಂಡಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

►ಮಾರ್ಕೊ ಅಸೆನ್ಸಿಯೊ ಅವರು ಸ್ಪೇನ್ ಯುರೋಪಿಯನ್ ಅಂಡರ್ 19 ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಿಯಲ್ ಮ್ಯಾಡ್ರಿಡ್ ತಂಡದ ಸದಸ್ಯರಾಗಿರುವ ಮಾರ್ಕೊ ಎರಡು ಬಾರಿ ಚಾಂಪಿಯನ್ಸ್ ಲೀಗ್, ಒಂದು ಬಾರಿ ಲಾ ಲಿಗಾ, ಎರಡು ಕ್ಲಬ್ ವರ್ಲ್ಡ್ ಕಪ್ ಮತ್ತು ಎರಡು ಬಾರಿ ಸೂಪರ್ ಕಪ್ ಪ್ರಶಸ್ತಿ ಗೆಲ್ಲಲು ತಂಡಕ್ಕೆ ನೆರವಾಗಿದ್ದರು.

 ಸ್ಪೇನ್ ಈ ವರೆಗೆ ನಡೆದಿರುವ ವಿಶ್ವಕಪ್‌ಗಳಲ್ಲಿ 14 ಆವೃತ್ತಿಗಳಲ್ಲಿ ಆಡಿವೆ. 1 ಬಾರಿ ಮಾತ್ರ ಪ್ರಶಸ್ತಿ ಗೆದ್ದುಕೊಂಡಿದೆ.

►ಪೋರ್ಚುಗಲ್‌ಗೆ ರಶ್ಯಾದಲ್ಲಿ ಪ್ರಶಸ್ತಿ ಗೆಲ್ಲುವ ಕನಸು

  ಪೋರ್ಚುಗಲ್ ತಂಡ ವಿವಿಧ ಕಾರಣಗಳಿಂದಾಗಿ ರಶ್ಯಾದಲ್ಲಿ ಪ್ರಶಸ್ತಿ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದೆ. 2016ರಲ್ಲಿ ಯುರೋಕಪ್ ಜಯಿಸಿದ್ದ ಪೋರ್ಚುಗಲ್ ತಂಡ 2017ರ ಕಾನ್ಫೆಡರೇಶನ್ ಕಪ್‌ನಲ್ಲಿ 3ನೇ ಸ್ಥಾನ ಪಡೆದಿತ್ತು. ಮಾಸ್ಕೊವನ್ನು ಪ್ಲೇ ಆಫ್‌ನಲ್ಲಿ ಸೋಲಿಸಿತ್ತು. ಫೆರ್ನಾಂಡೊ ಸಾಂಟೊಸ್ ತಂಡದ ಕೋಚ್ ಆಗಿದ್ದಾರೆ.

 ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ವಿಶ್ವಶ್ರೇಷ್ಠ ಆಟಗಾರರಿಂದಾಗಿ ಪೋರ್ಚುಗಲ್ ಬಲಿಷ್ಠವಾಗಿದೆ. 5 ಬಾರಿ ಬ್ಯಾಲನ್ ಡಿ ಓರ್ ಜಯಿಸಿರುವ ರೊನಾಲ್ಡೊಗೆ ತಮ್ಮ ದೇಶದ ವಿಶ್ವಕಪ್ ಬರವನ್ನು ನೀಗಿಸಲು ಇದೊಂದು ಉತ್ತಮ ಅವಕಾಶವಾಗಿದೆ.

ಪೋರ್ಚುಗಲ್ ತಂಡ ಈ ವರೆಗೆ 6 ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸಿತ್ತು. 1966ರಲ್ಲಿ ಮೂರನೇ ಸ್ಥಾನ ಪಡೆದಿತ್ತು.

►ಏಶ್ಯಾದ ಬಲಿಷ್ಠ ತಂಡ ಇರಾನ್ ಏಶ್ಯಾದ ಬಲಿಷ್ಠ ಫುಟ್ಬಾಲ್ ತಂಡಗಳಲ್ಲಿ ಒಂದಾಗಿರುವ ಇರಾನ್ ಸತತ ಎರಡು ವಿಶ್ವಕಪ್‌ಗಳಲ್ಲಿ ಪಾಲ್ಗೊಂಡಿತ್ತು. 18 ಅರ್ಹತಾ ಪಂದ್ಯಗಳಲ್ಲಿ ಇರಾನ್ 18 ಗೋಲುಗಳನ್ನು ಜಮೆ ಮಾಡಿತ್ತು. ಪೋರ್ಚುಗಲ್ ಕೋಚ್ ಕಾರ್ಲೊಸ್ ಕ್ಯುರೊಝ್ ಅವರ ಮಾರ್ಗದರ್ಶನದಲ್ಲಿ ಇರಾನ್ ತಂಡ ನಾಲ್ಕನೇ ಬಾರಿ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿದೆ. ಆದರೆ ಇರಾನ್ ಈ ತನಕ ಗ್ರೂಪ್ ಹಂತದಿಂದ ಮುಂದಕ್ಕೆ ತೇರ್ಗಡೆಯಾಗಿಲ್ಲ.

 ಇರಾನ್ ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. 18 ಅರ್ಹತಾ ಪಂದ್ಯಗಳಲ್ಲಿ ಕೇವಲ 5 ಗೋಲುಗಳು ಕೈ ಜಾರಿರುವುದು ಇದಕ್ಕೆ ಸಾಕ್ಷಿಯಾಗಿದೆ. ವಿಂಗರ್ ಅಲಿರೆಝಾ ಜಹಾನ್‌ಬಕ್ಷಾ , ಸರ್ದಾರ್ ಅರ್ಮೊನ್ ಮತ್ತು ಸಯೀದ್ ಎಝಾಟೊಲೈ ಅವರನ್ನು ಇರಾನ್ ಅವಲಂಭಿಸಿದೆ. 22ರ ಹರೆಯದ ಸರ್ದಾರ್ ಅರ್ಮೊನ್ ಅರ್ಹತಾ 11 ಗೋಲುಗಳನ್ನು ದಾಖಲಿಸಿದ್ದರು.

►20 ವರ್ಷಗಳ ಬಳಿಕ ಮೊರಾಕ್ಕೊ ಪ್ರವೇಶ ಮೊರಾಕ್ಕೊ ತಂಡ 20 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಪ್ರವೇಶ ಪಡೆದಿದೆ. 1998ರಲ್ಲಿ ಫ್ರಾನ್ಸ್ ನಲ್ಲಿ ಗ್ರೂಪ್ ಹಂತದಲ್ಲಿ ಆಡಿತ್ತು. ಆ ಬಳಿಕ ಇದೇ ಮೊದಲ ಬಾರಿ ಅವಕಾಶ ಪಡೆದಿದೆ. ಈ ವರೆಗೆ 4 ಬಾರಿ ಮೊರಾಕ್ಕೊ ವಿಶ್ವಕಪ್‌ಗೆ ಪ್ರವೇಶ ಗಿಟಿಸಿಕೊಂಡಿತ್ತು. 1986ರಲ್ಲಿ ಮೊರಾಕ್ಕೊ 16ನೇ ಸುತ್ತು ಪ್ರವೇಶಿಸಿತ್ತು. ಇದು ತಂಡದ ಈ ವರೆಗಿನ ಶ್ರೇಷ್ಠ ಸಾಧನೆ. ಮೊರಾಕ್ಕೊ ವಿಶ್ವಕಪ್‌ನ 13 ಪಂದ್ಯಗಳಲ್ಲಿ ಆಡಿತ್ತು. 2 ಜಯ, 4 ಡ್ರಾ ಮತ್ತು 7 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. 1986ರಲ್ಲಿ ಪೋರ್ಚುಗಲ್ ವಿರುದ್ಧ 3-1 ಮತ್ತು 1998ರಲ್ಲಿ ಸ್ಕಾಟ್ಲೆಂಡ್ ವಿರುದ್ಧ 3-0 ಜಯ ಗಳಿಸಿತ್ತು. ಉತ್ತರ ಅಮೆರಿಕದ ತಂಡವಾಗಿರುವ ಮೊರಾಕ್ಕೊ ತಂಡದಲ್ಲಿ ಕೆಲವು ಮಂದಿ ಪ್ರತಿಭಾವಂತ ಆಟಗಾರರಿದ್ದಾರೆ. ಅಜೆಕ್ಸ್ ಮಿಡ್‌ಫೀಲ್ಡರ್ ಹಕೀಮ್ ಝಿಯಾಕ್ ಮತ್ತು ಯೂನೆಸ್ ಬೆಲ್‌ಹಾಂಡಾ ಮತ್ತಿತರ ಆಟಗಾರರಿದ್ದಾರೆ.

ನಾಬಿಲ್ ಡಿರಾರ್ ಅವರು ಮೊರಾಕ್ಕೊ ತಂಡದ ವಿಶ್ವಕಪ್‌ಗೆ ಪ್ರವೇಶ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News