ಪಾಲಿ ಉಮ್ರಿಗಾರ್ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ

Update: 2018-06-12 15:28 GMT

ಬೆಂಗಳೂರು, ಜೂ.12: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 2016-17 ಹಾಗೂ 2017-18ರ ಸಾಲಿನಲ್ಲಿ ನೀಡಿರುವ ಅತ್ಯುತ್ತಮ ಪ್ರದರ್ಶನಕ್ಕೆ ಶ್ರೇಷ್ಠ ಅಂತರ್‌ರಾಷ್ಟ್ರೀಯ ಕ್ರಿಕೆಟಿಗನಿಗೆ ನೀಡುವ ಪಾಲಿ ಉಮ್ರಿಗಾರ್ ಪ್ರಶಸ್ತಿಯನ್ನು ಮಂಗಳವಾರ ಸ್ವೀಕರಿಸಿದ್ದಾರೆ.

ಉದ್ಯಾನನಗರಿಯಲ್ಲಿ ನಡೆದ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಹ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡರು.

ಐಪಿಎಲ್ ವೇಳೆ ಕಾಣಿಸಿಕೊಂಡ ಕುತ್ತಿಗೆ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಕೊಹ್ಲಿ ಬಹುಚರ್ಚಿತ ಸರ್ರೆ ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದಾರೆ. ಜೂ.15 ರಂದು ಎನ್‌ಸಿಎಯಲ್ಲಿ ನಡೆಯುವ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಹಾಜರಾಗುವ ಸಾಧ್ಯತೆಯಿದೆ.

 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎಂಎಕೆ ಪಟೌಡಿ ಸ್ಮಾರಕ ಉಪನ್ಯಾಸ ನೀಡಲಿರುವ ಇಂಗ್ಲೆಂಡ್ ಮಾಜಿ ನಾಯಕ ಕೇವಿನ್ ಪೀಟರ್ಸನ್, ಗುರುವಾರದಿಂದ ಬೆಂಗಳೂರಿನಲ್ಲಿ ಭಾರತ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನಾಡಲಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸದಸ್ಯರುಗಳು, ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಉಪಸ್ಥಿತರಿದ್ದರು.

ವಿಶ್ವದ ಅತ್ಯಂತ ಬಿಡುವಿಲ್ಲದ ಕ್ರಿಕೆಟಿಗನಾಗಿರುವ ಕೊಹ್ಲಿ 2016-17 ಸಾಲಿನಲ್ಲಿ 74ರ ಸರಾಸರಿಯಲ್ಲಿ 13 ಟೆಸ್ಟ್ ಪಂದ್ಯಗಳಲ್ಲಿ 1,332 ರನ್ ಗಳಿಸಿದ್ದರು. ಇದೇ ಅವಧಿಯಲ್ಲಿ 27 ಏಕದಿನ ಪಂದ್ಯಗಳಲ್ಲಿ 84.22ರ ಸರಾಸರಿಯಲ್ಲಿ 1,516 ರನ್ ಗಳಿಸಿದ್ದರು.

2017-18ರ ಋತುವಿನಲ್ಲಿ 6 ಟೆಸ್ಟ್ ಪಂದ್ಯಗಳಲ್ಲಿ 89ರ ಸರಾಸರಿಯಲ್ಲಿ 896 ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 75.50ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಅಂಶುಮನ್ ಗಾಯಕ್ವಾಡ್ ಹಾಗೂ ಸುಧಾ ಸಿಂಗ್ ಸಿ.ಕೆ. ನಾಯ್ದು ಜೀವಮಾನ ಸಾಧನಾ ಪ್ರಶಸ್ತಿಯನ್ನು ಸ್ವೀಕರಿಸಿದರು. ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಜಲಜ್ ಸಕ್ಸೇನ, ಪರ್ವೆಝ್ ರಸೂಲ್ ಹಾಗೂ ಕೃನಾಲ್ ಪಾಂಡ್ಯ ಪ್ರಶಸ್ತಿಗೆ ಭಾಜನರಾದರು.

ಜಲಜ್ ಹಾಗೂ ರಸೂಲ್ ರಣಜಿ ಟ್ರೋಫಿಯ ಶ್ರೇಷ್ಠ ಆಲ್‌ರೌಂಡರ್ ಪ್ರಶಸ್ತಿ ಪಡೆದರು. ಕೃನಾಲ್ ವಿಜಯ್ ಹಝಾರೆ ಏಕದಿನ ಟೂರ್ನಿಯಲ್ಲಿ ನೀಡಿರುವ ಪ್ರದರ್ಶಕ್ಕೆ ಪ್ರಶಸ್ತಿ ಪಡೆದರು. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ 2016-17ರ ಸಾಲಿನಲ್ಲಿ ನೀಡಿರುವ ಅತ್ಯುತ್ತಮ ಪ್ರದರ್ಶನಕ್ಕೆ ಶ್ರೇಷ್ಠ ಅಂತರ್‌ರಾಷ್ಟ್ರೀಯ ಕ್ರಿಕೆಟರ್(ಮಹಿಳೆ) ಪ್ರಶಸ್ತಿ ಸ್ವೀಕರಿಸಿದ್ದಾರೆ.

ಬಿಸಿಸಿಐ 9 ವಿಭಾಗಗಳ ಪ್ರಶಸ್ತಿ ಮೊತ್ತವನ್ನು 1 ಲಕ್ಷ ರೂ.ನಿಂದ 1.5 ಲಕ್ಷ ರೂ.ಗೆ ಏರಿಸಿದೆ.

   2016-17 ಹಾಗೂ 2017-18ರ ಋತುವಿನ ಶ್ರೇಷ್ಠ ಕ್ರಿಕೆಟ್ ಸಂಸ್ಥೆ ಪ್ರಶಸ್ತಿಯನ್ನು ಕ್ರಮವಾಗಿ ಬಂಗಾಳ ಕ್ರಿಕೆಟ್ ಸಂಸ್ಥೆ(ಕ್ಯಾಬ್) ಹಾಗೂ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಪಡೆದುಕೊಂಡಿವೆ.

‘‘ಬಿಸಿಸಿಐ ವಾರ್ಷಿಕ ಪ್ರಶಸ್ತಿ ಜಯಿಸಿರುವ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುವೆ. ಕಳೆದ ಎರಡು ವರ್ಷಗಳಲ್ಲಿ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ನೀಡಿವೆ. ಆಟಗಾರರ ಸಾಧನೆ ನಮಗೆ ಹೆಮ್ಮೆ ತಂದಿದೆ. ಮೈದಾನದೊಳಗೆ ಆಟಗಾರರು ತೋರಿರುವ ಸಾಧನೆಗೆ ನಮ್ಮ ಕಿರು ಕಾಣಿಕೆ ಇದಾಗಿದೆ’’ ಎಂದು ಆಡಳಿತಾಧಿಕಾರಿಗಳ ಸಮಿತಿಯ ಅಧ್ಯಕ್ಷ ವಿನೋದ್ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News