ಜನಪ್ರತಿನಿಧಿ ಪ್ರಾಮಾಣಿಕನೆಂದು ಭಾವಿಸುವುದು ಆತ್ಮವಂಚನೆಯಾದೀತು: ಸಚಿವ ಕೃಷ್ಣಭೈರೇಗೌಡ

Update: 2018-06-12 15:41 GMT

ಬೆಂಗಳೂರು, ಜೂ.12: ರಾಜಕೀಯ ಜನಪ್ರತಿನಿಧಿಗಳು ತಾವು ಶೇ.100ರಷ್ಟು ಪ್ರಾಮಾಣಿಕರೆಂದು ಭಾವಿಸಿಕೊಂಡರೆ, ಅದು ಆತ್ಮವಂಚನೆಯ ಪ್ರತೀಕವಾದೀತು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅಭಿಪ್ರಾಯಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿಚಾರಕ್ಕೆ ಬಂದಾಗ ನಾನು ಅಪರಂಜಿ, 24 ಕ್ಯಾರೆಟ್ ಚಿನ್ನ ಎಂದು ಹೇಳಿಕೊಳ್ಳುವುದು ಆತ್ಮವಂಚನೆಯ ಮಾತಾಗುತ್ತದೆ. ಈಗಿನ ಆಡಳಿತ ವ್ಯವಸ್ಥೆಯಲ್ಲಿ ಯಾರೊಬ್ಬರೂ ಪ್ರಾಮಾಣಿಕರಾಗಿ ಉಳಿಯುವುದು ಕಷ್ಟವೆಂದು ತಿಳಿಸಿದರು.

ಕಳೆದ 20ವರ್ಷಗಳ ಆಡಳಿತವನ್ನು ಗಮನಿಸಿದರೆ ಆಡಳಿತ ವ್ಯವಸ್ಥೆ ಕುಸಿದಿದೆ. ಭ್ರಷ್ಟಾಚಾರ ಮೇಲಿನಿಂದ ಕೆಳಗಿನವರೆಗೂ ವ್ಯಾಪಕವಾಗಿದೆ. ಈ ವ್ಯವಸ್ಥೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಪಾಲಿಕೆ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಜನ ನಮ್ಮ ಮೇಲೆ ವಿಶ್ವಾಸ, ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿ ವ್ಯವಸ್ಥೆಯನ್ನು ಸುಧಾರಿಸುವುದು ಒಳ್ಳೆಯದು. ಕೇವಲ ಆರೋಪ, ಪ್ರತ್ಯಾರೋಪಗಳಿಂದ ವ್ಯವಸ್ಥೆ ಬದಲಾಗುವುದಿಲ್ಲ. ಕಳೆದ ಬಾರಿ ಕೃಷಿ ಸಚಿವನಾಗಿ ಯಾವ ರೀತಿ ಕಾರ್ಯನಿರ್ವಹಿಸಿದ್ದೇನೆಂದು ಜನತೆಗೆ ಗೊತ್ತಿದೆ. ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಂತಹ ನುರಿತು ರಾಜಕಾರಣಿ ವ್ಯಸ್ಥೆಯನ್ನು ಸುಧಾರಿಸುವಂತಹ ಪ್ರಯತ್ನ ಮಾಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News