ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಅಮೆಲಿಯಾ

Update: 2018-06-13 18:19 GMT

ಡಬ್ಲಿನ್, ಜೂ.13: ನ್ಯೂಝಿಲೆಂಡ್ ಕ್ರಿಕೆಟ್ ಆಟಗಾರ್ತಿ ಅಮೆಲಿಯಾ ಕೆರ್ರ್‌ ಐರ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ಔಟಾಗದೆ 232 ರನ್ ಗಳಿಸುವುದರೊಂದಿಗೆ ಇತಿಹಾಸ ನಿರ್ಮಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಎರಡನೇ ಆಟಗಾರ್ತಿ ಎನಿಸಿಕೊಂಡ ಕೆರ್ರ್‌ 145 ಎಸೆತ ಗಳಲ್ಲಿ 232 ರನ್ ಗಳಿಸಿದರು. ಇದು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್. ಈ ಸಾಧನೆಯ ಮೂಲಕ ಅಮೆಲಿಯಾ 21 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿಹಾಕಿದರು. 1997ರಲ್ಲಿ ಮುಂಬೈನಲ್ಲಿ ಆಸ್ಟ್ರೇಲಿಯದ ಆಟಗಾರ್ತಿ ಬೆಲಿಂಡ ಕ್ಲಾರ್ಕ್ ಡೆನ್ಮಾರ್ಕ್ ತಂಡದ ವಿರುದ್ಧ ದ್ವಿಶತಕ(229)ಸಿಡಿಸಿದ್ದರು.

ಅಮೆಲಿಯಾ 46ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ 134 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. 17ರ ಹರೆಯದ ಅಮೆಲಿಯಾ 145 ಎಸೆತಗಳಲ್ಲಿ 31 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿರುವ ಮೊದಲ ಯುವ ಕ್ರಿಕೆಟರ್(ಪುರುಷ, ಮಹಿಳೆಯರ ಸಹಿತ) ಎನಿಸಿಕೊಂಡಿದ್ದಾರೆ.

ಅಮೆಲಿಯಾ ಸಾಹಸದ ನೆರವಿನಿಂದ ನ್ಯೂಝಿಲೆಂಡ್ ಮಹಿಳಾ ತಂಡ ಸತತ 3ನೇ ಪಂದ್ಯದಲ್ಲಿ 400ಕ್ಕೂ ಅಧಿಕ ರನ್ ಗಳಿಸಿತು. ಅಮೆಲಿಯಾ ಎರಡನೇ ವಿಕೆಟ್‌ಗೆ ಕಾಸ್ಪೆರೆಕ್‌ರೊಂದಿಗೆ 295 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 3ಕ್ಕೆ 440 ರನ್‌ಗೆ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News