ವಿಶ್ವಕಪ್: ಅರ್ಜೆಂಟೀನ ವಿರುದ್ಧ ಡ್ರಾ ಸಾಧಿಸಿದ ಐಸ್‌ಲ್ಯಾಂಡ್

Update: 2018-06-16 15:44 GMT

 ಮಾಸ್ಕೋ, ಜೂ.16: ವಿಶ್ವಕಪ್‌ಗೆ ಮೊದಲ ಬಾರಿ ಅರ್ಹತೆ ಗಿಟ್ಟಿಸಿಕೊಂಡಿರುವ ಅತ್ಯಂತ ಪುಟ್ಟ ರಾಷ್ಟ್ರ ಐಸ್‌ಲ್ಯಾಂಡ್ ಟೂರ್ನಮೆಂಟ್‌ನ ಫೇವರಿಟ್ ಹಾಗೂ ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನ ವಿರುದ್ಧ ಆಡಿದ ಟೂರ್ನಿಯ ‘ಡಿ’ ಗುಂಪಿನ ಪಂದ್ಯದಲ್ಲಿ 1-1 ಡ್ರಾ ಸಾಧಿಸಿ ಅಚ್ಚರಿ ಮೂಡಿಸಿದೆ.

  ಚೊಚ್ಚಲ ವಿಶ್ವಕಪ್‌ನಲ್ಲಿ ಐಸ್‌ಲ್ಯಾಂಡ್ ಸಾಧನೆ ಸ್ಮರಣೀಯವಾಗಿದೆ. ಫ್ರೀ-ಕಿಕ್‌ನ ಲಾಭ ಎತ್ತಲು ವಿಫಲರಾದ ಅರ್ಜೆಂಟೀನ ನಾಯಕ ಲಿಯೊನೆಲ್ ಮೆಸ್ಸಿಗೆ ಈ ಪಂದ್ಯ ಕಹಿಯಾಗಿ ಪರಿಣಮಿಸಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಐಸ್‌ಲ್ಯಾಂಡ್ ಗೋಲ್‌ಕೀಪರ್ ಹ್ಯಾನ್ಸ್ ಹಲ್ಡರ್‌ಸನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಅರ್ಜೆಂಟೀನದ ಸರ್ಗಿಯೊ ಅಗುರೊ 19ನೇ ನಿಮಿಷದಲ್ಲಿ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ನಾಲ್ಕು ನಿಮಿಷಗಳ ಬಳಿಕ ಐಸ್‌ಲ್ಯಾಂಡ್ 1-1 ರಿಂದ ಸಮಬಲ ಸಾಧಿಸಿ ತಿರುಗೇಟು ನೀಡಿತು.

ಅಲ್ಫೆಡ್ ಫಿನ್‌ಬೊಗ್ಸನ್ 23ನೇ ನಿಮಿಷದಲ್ಲಿ ಗೋಲು ಬಾರಿಸಿ ಐಸ್‌ಲ್ಯಾಂಡ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.

ಅರ್ಜೆಂಟೀನದ ಪರ 144ನೇ ಪಂದ್ಯ ಆಡಿದ ಜೇವಿಯರ್ ಮಸ್ಕರನೊ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಜೇವಿಯರ್ ಝನೆಟ್ಟಿ(143) ದಾಖಲೆಯನ್ನು ಮುರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News