ಅಫ್ಘಾನ್: ಕದನವಿರಾಮ ಮುಂದುವರಿಕೆಗೆ ತಾಲಿಬಾನ್ ನಕಾರ

Update: 2018-06-17 17:34 GMT

ಕಾಬೂಲ್,ಜೂ.17: ಈದುಲ್ ಫಿತ್ರ್ ಹಬ್ಬದ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಮೂರು ದಿನಗಳ ಕದನವಿರಾಮವನ್ನು ತಾವು ವಿಸ್ತರಿಸುವುದಿಲ್ಲವೆಂದು ತಾಲಿಬಾನ್ ಬಂಡುಕೋರರು ರವಿವಾರ ಘೋಷಿಸಿದೆ.

ತಾಲಿಬಾನ್ ಬಂಡುಕೋರರ ಜೊತೆಗೆ ಏರ್ಪಡಿಸಲಾದ ಕದನವಿರಾಮವು ಮುಂದುವರಿಯಲಿದೆಯೆಂದು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಘೋಷಿಸಿದ್ದರು ಹಾಗೂ ತಾಲಿಬಾನ್ ಕೂಡಾ ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕೆಂದು ಹೇಳಿದ್ದರು. ಇದಾದ ಬೆನ್ನಲ್ಲೇ ತಾಲಿಬಾನ್ ಬಂಡುಕೋರರ ವಕ್ತಾರ ಝಬಿನುಲ್ಲಾ ಮುಜಾಹಿದ್ ಕದನವಿರಾಮ ವಿಸ್ತರಿಸುವುದಿಲ್ಲವೆಂದು ಪ್ರತಿಕ್ರಿಯಿಸಿದ್ದಾನೆ.

‘‘ಕದನವಿರಾಮ ರವಿವಾರ ರಾತ್ರಿ ಕೊನೆಗೊಳ್ಳಲಿದ್ದು, ನಮ್ಮ ಕಾರ್ಯಾಚರಣೆ ಮತ್ತೆ ಆರಂಭಗೊಳ್ಳಲಿದೆ’’ ಎಂದು ಝುಬಿನುಲ್ಲಾ ವಾಟ್ಸ್ಯಾಪ್ ಸಂದೇಶದ ಮೂಲಕ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾನೆ.

    2001ರಲ್ಲಿ ಅಮೆರಿಕವು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ ಬಳಿಕ ತಾಲಿಬಾನ್ ಹಾಗೂ ಅಫ್ಘಾನ್ ಆಡಳಿತದ ನಡುವೆ ಕದನವಿರಾಮ ಏರ್ಪಟ್ಟಿರುವುದು ಇದು ಮೊದಲ ಸಲವಾಗಿದ್ದು, ಅಫ್ಘಾನ್ ನಾಗರಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News