ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿಶ್ವ ದಾಖಲೆ

Update: 2018-06-19 17:09 GMT

ನಾಟಿಂಗ್‌ಹ್ಯಾಮ್, ಜೂ.19: ಆಸ್ಟ್ರೇಲಿಯ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನೂತನ ವಿಶ್ವ ದಾಖಲೆ ನಿರ್ಮಿಸಿದೆ.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 481 ರನ್ ಗಳಿಸಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಗಳಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿತು.

ಎರಡು ವರ್ಷಗಳ ಹಿಂದೆ ಪಾಕಿಸ್ತಾನ ವಿರುದ್ಧ ನಾಟಿಂಗ್‌ಹ್ಯಾಮ್ ಮೈದಾನದಲ್ಲೇ 3 ವಿಕೆಟ್ ನಷ್ಟಕ್ಕೆ 444 ರನ್ ಗಳಿಸಿದ್ದ ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಮೊತ್ತ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿತ್ತು.ಇದೀಗ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದೆ.

ಅಗ್ರ ಸರದಿ ದಾಂಡಿಗರಾದ ಜಾನಿ ಬೈರ್‌ಸ್ಟೋವ್ 139 ರನ್(92 ಎಸೆತ, 15 ಬೌಂಡರಿ, 5 ಸಿಕ್ಸರ್) ಹಾಗೂ ಅಲೆಕ್ಸ್ ಹೇಲ್ಸ್ 147 ರನ್(92 ಎಸೆತ, 16 ಬೌಂಡರಿ, 5 ಸಿಕ್ಸರ್) ಭರ್ಜರಿ ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾಣಿಕೆ ನೀಡಿದರು.

ಆರಂಭಿಕ ಆಟಗಾರ ಜೇಸನ್ ರಾಯ್(82) ಹಾಗೂ ನಾಯಕ ಇಯಾನ್ ಮೊರ್ಗನ್(67)ಕೂಡ ಮಹತ್ವದ ಕೊಡುಗೆ ನೀಡಿದರು.

 ರಾಯ್ ಹಾಗೂ ಬೈರ್‌ಸ್ಟೋವ್ ಮೊದಲ ವಿಕೆಟ್‌ಗೆ 159 ರನ್ ಸೇರಿಸುವ ಮೂಲಕ ದೊಡ್ಡ ಸ್ಕೋರ್‌ಗೆ ಭದ್ರಬುನಾದಿ ಹಾಕಿದರು. ರಾಯ್ ಔಟಾದ ಬಳಿಕ ಬೈರ್‌ಸ್ಟೋವ್ ಹಾಗೂ ಹೇಲ್ಸ್ 2ನೇ ವಿಕೆಟ್‌ಗೆ 151 ರನ್ ಸೇರಿಸಿ ಆಸ್ಟ್ರೇಲಿಯ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು.

ಹೇಲ್ಸ್ ನಾಯಕ ಮೊರ್ಗನ್‌ರೊಂದಿಗೆ 4ನೇ ವಿಕೆಟ್‌ಗೆ 124 ರನ್ ಜೊತೆಯಾಟ ನಡೆಸಿ ಇಂಗ್ಲೆಂಡ್ 48ನೇ ಓವರ್‌ನಲ್ಲಿ 459 ರನ್ ಗಳಿಸಲು ನೆರವಾದರು.

 ಆಸ್ಟ್ರೇಲಿಯ 8 ಬೌಲರ್‌ಗಳನ್ನು ದಾಳಿಗಿಳಿಸಿತು. ರಿಚರ್ಡ್‌ಸನ್(3-92) ಮಾತ್ರ ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News