6.85 ಕೋಟಿ ಜನರು ಜಾಗತಿಕ ನಿರ್ವಸಿತರು: ವಿಶ್ವಸಂಸ್ಥೆ

Update: 2018-06-19 18:04 GMT

ಜಿನೇವ, ಜೂ. 19: ಜಗತ್ತಿನಲ್ಲಿ ಕಳೆದ ವರ್ಷ ಯುದ್ಧ, ಹಿಂಸೆ ಮತ್ತು ದೌರ್ಜನ್ಯಗಳಿಂದಾಗಿ ದಾಖಲೆಯ 6.85 ಕೋಟಿ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ. ನಿರ್ವಸಿತರಾದವರಲ್ಲಿ ಹೆಚ್ಚಿನವರು ಸಿರಿಯ ಮತ್ತು ಮ್ಯಾನ್ಮಾರ್ ದೇಶಗಳ ಪ್ರಜೆಗಳು.

ಈ ಸಂಖ್ಯೆಯು ಅದರ ಹಿಂದಿನ ವರ್ಷಕ್ಕಿಂತ ಸುಮಾರು 30 ಲಕ್ಷ ಹೆಚ್ಚಾಗಿದೆ. ಅದೇ ವೇಳೆ, ಒಂದು ದಶಕದ ಹಿಂದಿನ ಅವಧಿಯ ಸಂಖ್ಯೆ 4.27 ಕೋಟಿಗಿಂತ 50 ಶೇಕಡದಷ್ಟು ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆಯ ವರದಿ ತಿಳಿಸಿದೆ.

ಹಾಲಿ ನಿರ್ವಸಿತರಾದವರ ಸಂಖ್ಯೆಯು ಇಡೀ ಥಾಯ್ಲೆಂಡ್‌ನ ಜನಸಂಖ್ಯೆಗೆ ಸಮವಾಗಿದೆ.

‘‘ನಾವು ಮಹತ್ವದ ಹಂತದಲ್ಲಿದ್ದೇವೆ. ಜಾಗತಿಕವಾಗಿ ಬಲವಂತವಾಗಿ ನಿರ್ವಸಿತರಾದವರನ್ನು ಯಶಸ್ವಿಯಾಗಿ ನಿಭಾಯಿಸಲು ನಮಗೆ ನೂತನ ಹಾಗೂ ಹೆಚ್ಚು ಸಮಗ್ರ ವಿಧಾನಗಳ ಅಗತ್ಯವಿದೆ. ಈ ಜವಾಬ್ದಾರಿಯನ್ನು ನಿಭಾಯಿಸುವ ಹೊಣೆಯನ್ನು ಕೇವಲ ಒಂದೆರಡು ದೇಶಗಳು ಅಥವಾ ಸಮುದಾಯಗಳ ಮೇಲೆ ಬಿಟ್ಟುಬಿಡಲು ಸಾಧ್ಯವಿಲ್ಲ’’ ಎಂದು ವಿಶ್ವಸಂಸ್ಥೆಯ ನಿರ್ವಸಿತರ ಹೈಕಮಿಶನರ್ ಫಿಲಿಪ್ಪೊ ಗ್ರಾಂಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News