×
Ad

ಘೌತದಲ್ಲಿ ಸಿರಿಯ ಪಡೆಗಳಿಂದ ಮಾನವತೆ ವಿರುದ್ಧ ಅಪರಾಧ: ವಿಶ್ವಸಂಸ್ಥೆಯ ತನಿಖಾ ಆಯೋಗದ ವರದಿ

Update: 2018-06-21 22:33 IST

ಜಿನೇವ, ಜೂ. 21: ಪೂರ್ವ ಘೌತಕ್ಕೆ ಮುತ್ತಿಗೆ ಹಾಕಿದ ವೇಳೆ ಸಿರಿಯ ಸರಕಾರದ ಪಡೆಗಳು ನಾಗರಿಕರನ್ನು ಉದ್ದೇಶಪೂರ್ವಕವಾಗಿ ಹಸಿದಿರುವಂತೆ ಮಾಡಿರುವುದು ಸೇರಿದಂತೆ, ಮಾನವತೆಯ ವಿರುದ್ಧದ ಅಪರಾಧಗಳನ್ನು ನಡೆಸಿವೆ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಬುಧವಾರ ಹೇಳಿದ್ದಾರೆ.

ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿರುವ ಘೌತ ಪಟ್ಟಣಕ್ಕೆ ಸಿರಿಯ ಪಡೆಗಳು 5 ವರ್ಷಗಳಿಂದ ಹಾಕಿರುವ ಮುತ್ತಿಗೆಯು, ಪಟ್ಟಣದ ನಿಯಂತ್ರಣವು ಸಿರಿಯ ಪಡೆಗಳ ನಿಯಂತ್ರಣಕ್ಕೆ ಬಂದ ಬಳಿಕ ಎಪ್ರಿಲ್‌ನಲ್ಲಿ ಕೊನೆಗೊಂಡಿತ್ತು.

‘‘ಇದು ಆಧುನಿಕ ಇತಿಹಾಸದ ಅತ್ಯಂತ ದೀರ್ಘಾವಧಿಯ ಸಕ್ರಿಯ ಮುತ್ತಿಗೆಯಾಗಿತ್ತು. ಸಿರಿಯದಲ್ಲಿ ನಡೆದಿರುವ ಈ ಮಾದರಿಯ ಯುದ್ಧವನ್ನು ವಿಶ್ವಸಂಸ್ಥೆಯ ತನಿಖಾ ಆಯೋಗ ‘ಅನಾಗರಿಕ’ ಎಂಬುದಾಗಿ ಖಂಡಿಸಿದೆ’’ ಎಂದು ವಿಶ್ವಸಂಸ್ಥೆಯ ತನಿಖಾಧಿಕಾರಿಗಳು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಪೂರ್ವ ಘೌತದಲ್ಲಿ ನಡೆದ ಘಟನೆಗಳ ಬಗ್ಗೆ ತುರ್ತಾಗಿ ತನಿಖೆ ನಡೆಸುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯು ವಿಶ್ವಸಂಸ್ಥೆಯ ತನಿಖಾ ಆಯೋಗಕ್ಕೆ ಮಾರ್ಚ್‌ನಲ್ಲಿ ಸೂಚನೆ ನೀಡಿತ್ತು.

ಆಯೋಗವು, ನಾಗರಿಕರು ಅನುಭವಿಸಿದ ನರಕಯಾತನೆಯ ಭಯಾನಕ ವಿವರಗಳನ್ನು ಒಳಗೊಂಡ 23 ಪುಟಗಳ ವರದಿಯನ್ನು ಬಿಡುಗಡೆಗೊಳಿಸಿದೆ.

‘‘ಮುತ್ತಿಗೆಗೊಳಗಾದ ನಾಗರಿಕರ ಮೇಲೆ ವಿವೇಚನಾರಹಿತವಾಗಿ ಆಕ್ರಮಣ ನಡೆಸಲಾಗಿದೆ ಹಾಗೂ ಅವರಿಗೆ ವ್ಯವಸ್ಥಿತವಾಗಿ ಅಹಾರ ಮತ್ತು ಔಷಧಿಗಳನ್ನು ನಿರಾಕರಿಸಲಾಗಿದೆ’’ ಎಂದು ಆಯೋಗದ ಮುಖ್ಯಸ್ಥ ಪೌಲೊ ಪಿನ್‌ಹೇರೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News