ಫಿಫಾ ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ 11 ವರ್ಷದ ಬಾಲಕಿ

Update: 2018-06-22 16:38 GMT

ಸೈಂಟ್ ಪೀಟರ್ಸ್‌ಬರ್ಗ್,ಜೂ.22: ತಮಿಳುನಾಡಿನ 11ರ ಬಾಲಕಿ ನಥಾನಿಯಾ ಜಾನ್ ಕೆ. ಸೈಂಟ್ ಪೀಟರ್ಸ್‌ಬರ್ಗ್ ಅರೆನಾದಲ್ಲಿ ಶುಕ್ರವಾರ ಕೋಸ್ಟರಿಕಾ ವಿರುದ್ಧ ಫಿಫಾ ವಿಶ್ವಕಪ್ ಪಂದ್ಯವನ್ನಾಡಿದ ಬ್ರೆಝಿಲ್ ತಂಡದೊಂದಿಗೆ ಫುಟ್ಬಾಲ್ ಚೆಂಡಿನೊಂದಿಗೆ ಮೈದಾನಕ್ಕೆ ಇಳಿದ ಭಾರತದ ಮೊದಲ ಬಾಲಕಿ ಎನಿಸಿಕೊಂಡರು. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

ನೀಲಗಿರಿಯ ನಥಾನಿಯಾ ಸ್ವತಃ ಚೆನ್ನಾಗಿ ಫುಟ್ಬಾಲ್ ಆಡುತ್ತಾಳೆ. ಇದೀಗ ವಿಶ್ವಕಪ್ ಪಂದ್ಯದ ಅಧಿಕೃತ ಚೆಂಡನ್ನು ಕೊಂಡೊಯ್ದ ಭಾರತದ ಮೊದಲ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರಿನ ರಿಶಿ ವ್ಯಾಲಿ ಸ್ಕೂಲ್‌ನಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ನಥಾನಿಯಾ ಫಿಫಾ ಪ್ರಾಯೋಜಕ ಕಂಪೆನಿ ಕೆಐಎ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಜಯ ಸಾಧಿಸಿ ಫಿಫಾ ವಿಶ್ವಕಪ್ ಟೂರ್ನಿಗೆ ರಶ್ಯಕ್ಕೆ ಪ್ರಯಾಣಿಸುವ ಅವಕಾಶ ಪಡೆದಿದ್ದರು.

ಕರ್ನಾಟಕದ 10ರ ಬಾಲಕ ರಿಶಿ ತೇಜ್ ಜೊತೆ ನಥಾನಿಯಾ ಕೂಡ ಅಧಿಕೃತ ಪಂದ್ಯದ ಚೆಂಡನ್ನು ಕೊಂಡೊಯ್ಯುವ ಅವಕಾಶ ಪಡೆದಿದ್ದಾರೆ.

‘‘ನನಗೆ ಅತೀವ ಸಂತೋಷವಾಗುತ್ತಿದೆ. ವಿಶ್ವಕಪ್‌ನಲ್ಲಿ ಭಾರತೀಯರೊಬ್ಬರು ಭಾಗವಹಿಸುವುದು ಅತ್ಯಂತ ಅಪರೂಪ. ನನ್ನ ಸೀನಿಯರ್ ಸ್ಕೂಲ್ ಟೀಮ್‌ನಲ್ಲಿ ಸೆಂಟರ್ ಫಾರ್ವರ್ಡ್ ಆಟಗಾರ್ತಿಯಾಗಿ ಆಡುತ್ತಿದ್ದೇನೆ. ಕೆಐಎ ಸ್ಪರ್ಧೆಯಲ್ಲಿ ಡ್ರಿಬ್ಲಿಂಗ್, ಜಗ್ಗಿಂಗ್ ಹಾಗೂ ಪೆನಾಲ್ಟಿ ಶೂಟಿಂಗ್ ಸ್ಕಿಲ್ಸ್ ಬಗ್ಗೆ ಕೇಳಿದಾಗ ಸುಲಭವಾಗಿ ನಿಭಾಯಿಸಿದ್ದೆ. ಭಾರತದಲ್ಲಿ ಬಾಲಕಿಯರು ಹೆಚ್ಚು ಫುಟ್ಬಾಲ್ ಆಡದೇ ಇರುವುದನ್ನು ಗಮನಿಸಿದ್ದೇನೆ’’ ಎಂದು ನಥಾನಿಯಾ ಹೇಳಿದ್ದಾರೆ.

ಲಿಯೊನೆಲ್ ಮೆಸ್ಸಿಯ ದೊಡ್ಡ ಅಭಿಮಾನಿಯಾಗಿರುವ ನಥಾನಿಯಾಗೆ ಅರ್ಜೆಂಟೀನ ಆಡುವ ಪಂದ್ಯದಲ್ಲಿ ಚೆಂಡನ್ನು ಮೈದಾನಕ್ಕೆ ಕೊಂಡೊಯ್ಯುವ ಅವಕಾಶ ಲಭಿಸದೇ ಇರುವುದಕ್ಕೆ ತುಂಬಾ ಬೇಸರವಾಗಿದೆ.

ಇದೀಗ ನಥಾನಿಯಾ ಬ್ರೆಝಿಲ್ ಸ್ಟಾರ್ ಆಟಗಾರ ನೇಮರ್ ಅಭಿಮಾನಿಯಾಗಿದ್ದಾರೆ. ನೇಮರ್‌ರನ್ನು ಹತ್ತಿರದಿಂದ ನೋಡಿದ್ದಕ್ಕೆ ತುಂಬಾ ಸಂತೋಷಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News