×
Ad

ಉ. ಕೊರಿಯ ವಿರುದ್ಧ ಆರ್ಥಿಕ ದಿಗ್ಬಂಧನ ಮುಂದುವರಿಸಿದ ಟ್ರಂಪ್

Update: 2018-06-23 22:20 IST

ವಾಶಿಂಗ್ಟನ್, ಜೂ. 23: ಉತ್ತರ ಕೊರಿಯದಿಂದ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ‘ಅಸಾಮಾನ್ಯ ಹಾಗೂ ಅಸಾಧಾರಣ’ ಬೆದರಿಕೆಯಿದೆ ಎಂಬುದಾಗಿ ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ದೇಶದ ವಿರುದ್ಧ ವಿಧಿಸಲಾಗಿರುವ ಆರ್ಥಿಕ ನಿರ್ಬಂಧಗಳನ್ನು ಮುಂದುವರಿಸಿದ್ದಾರೆ.

ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಜೊತೆಗೆ ಜೂನ್ 12ರಂದು ನಡೆದ ಶೃಂಗ ಸಮ್ಮೇಳನವು ಆ ದೇಶದ ಪರಮಾಣು ಅಸ್ತ್ರದ ಬೆದರಿಕೆಯನ್ನು ಕೊನೆಗೊಳಿಸಿದೆ ಎಂಬುದಾಗಿ ಟ್ರಂಪ್ ಹೇಳಿರುವ ಹೊರತಾಗಿಯೂ, ಶುಕ್ರವಾರ ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ಶ್ವೇತಭವನ ಕಳುಹಿಸಿರುವ ನೋಟಿಸ್‌ನಲ್ಲಿ ಈ ಅಧಿಕೃತ ಘೋಷಣೆ ಇದೆ ಎಂದು ‘ದ ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಶುಕ್ರವಾರ ಟ್ರಂಪ್ ಸಹಿ ಹಾಕಿರುವ ಘೋಷಣೆಯ ಪ್ರಕಾರ, ಉತ್ತರ ಕೊರಿಯದ ವಿರುದ್ಧ ವಿಧಿಸಲಾಗಿರುವ ಕಠಿಣ ಆರ್ಥಿಕ ದಿಗ್ಬಂಧನಗಳು ಇನ್ನೂ ಒಂದು ವರ್ಷ ಮುಂದುವರಿಯಲಿವೆ.

ಒಂದು ದಶಕದ ಹಿಂದೆ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲು. ಬುಶ್ ಮೊದಲ ಬಾರಿಗೆ ವಿಧಿಸಿದ್ದ ಆರ್ಥಿಕ ದಿಗ್ಬಂಧನಗಳು ಮುಂದುವರಿಯಲಿವೆ.

 ಉತ್ತರ ಕೊರಿಯದ ಕ್ಷಿಪಣಿ ಪರೀಕ್ಷೆಗಳು ಮತ್ತು ಇತರ ಕೃತ್ಯಗಳಿಗೆ ಪ್ರತಿಯಾಗಿ ಆ ದೇಶದ ನಾಯಕರು ಮತ್ತು ಆಡಳಿತಾರೂಢ ಪಕ್ಷವು ಅಮೆರಿಕದಲ್ಲಿ ಹೊಂದಿರುವ ಆಸ್ತಿಗಳ ಹಸ್ತಾಂತರದ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಸ್ವತಃ ಟ್ರಂಪ್ ಹಲವು ಬಾರಿ ವಿಸ್ತರಿಸಿರುವುದನ್ನು ಸ್ಮರಿಸಬಹುದಾಗಿದೆ.

ಈ ಬೆಳವಣಿಗೆಯು ಟ್ರಂಪ್‌ರ ಜೂನ್ 13ರ ಟ್ವೀಟ್‌ಗೆ ವಿರುದ್ಧವಾಗಿದೆ.

‘‘ಸುದೀರ್ಘ ಪ್ರವಾಸದಿಂದ ಈಗಷ್ಟೇ ಬಂದಿಳಿದೆ. ಆದರೆ, ನಾನು ಅಧಿಕಾರ ಸ್ವೀಕರಿಸಿದ ದಿನಕ್ಕೆ ಹೋಲಿಸಿದರೆ ಪ್ರತಿಯೊಬ್ಬರೂ ಇಂದು ಹೆಚ್ಚು ಸುರಕ್ಷಿತರಾಗಿದ್ದಾರೆ. ಇನ್ನು ಮುಂದೆ ಉತ್ತರ ಕೊರಿಯದಿಂದ ಪರಮಾಣು ಬೆದರಿಕೆ ಇರುವುದಿಲ್ಲ’’ ಎಂಬುದಾಗಿ ಟ್ರಂಪ್ ಅಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News