ಪಾಕ್: ಭಾರತೀಯ ರಾಯಭಾರಿಗೆ ಗುರುದ್ವಾರ ಪ್ರವೇಶ ನಿಷೇಧ

Update: 2018-06-23 16:57 GMT

ಇಸ್ಲಾಮಾಬಾದ್, ಜೂ. 23: ಅಗತ್ಯ ಅನುಮತಿಗಳನ್ನು ಹೊಂದಿರುವ ಹೊರತಾಗಿಯೂ, ಪಾಕಿಸ್ತಾನಕ್ಕೆ ಭಾರತದ ಹೈಕಮಿಶನರ್ ಅಜಯ್ ಬಿಸಾರಿಯರಿಗೆ ಶನಿವಾರ ಪಾಕಿಸ್ತಾನದ ಹಸನ್ ಅಬ್ದಲ್‌ನಲ್ಲಿರುವ ಗುರುದ್ವಾರ ಪಂಜ ಸಾಹಿಬ್ ಪ್ರವೇಶಿಸಲು ಅಧಿಕಾರಿಗಳು ಅವಕಾಶ ನೀಡಲಿಲ್ಲ.

ಎರಡು ತಿಂಗಳ ಹಿಂದೆ, ಬೈಸಾಖಿ ಆಚರಿಸಲು ಭಾರತದಿಂದ ಪಾಕಿಸ್ತಾನಕ್ಕೆ ಬಂದಿದ್ದ ಸಿಖ್ ಯಾತ್ರಿಕರಿಗಾಗಿ ಪ್ರಾಥಮಿಕ ಕಾನ್ಸುಲರ್ ಮತ್ತು ಶಿಷ್ಟಾಚಾರಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಭಾರತೀಯ ಹೈಕಮಿಶನ್ ಅಧಿಕಾರಿಗಳಿಗೆ ಅವಕಾಶ ನೀಡಿರಲಿಲ್ಲ ಎನ್ನುವುದನ್ನು ಸ್ಮರಿಸಬಹುದಾಗಿದೆ.

 ‘‘ಎಪ್ರಿಲ್ 12ರಂದು ವಾಘಾ ರೈಲು ನಿಲ್ದಾಣಕ್ಕೆ ಬಂದ ಸಿಖ್ ಯಾತ್ರಿಕರನ್ನು ಭೇಟಿಯಾಗಲು ಭಾರತೀಯ ಹೈಕಮಿಶನ್ ಅಧಿಕಾರಿಗಳ ತಂಡಕ್ಕೆ ಅನುಮತಿ ನೀಡಲಾಗಿರಲಿಲ್ಲ. ಅದೇ ರೀತಿ, ಅವರೊಂದಿಗೆ ಪೂರ್ವ ನಿಗದಿತ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಎಪ್ರಿಲ್ 14ರಂದು ಗುರುದ್ವಾರ ಪಂಜ ಸಾಹಿಬ್ ಪ್ರವೇಶಿಸಲೂ ಅವಕಾಶ ನೀಡಲಾಗಿರಲಿಲ್ಲ. ಈ ಮೂಲಕ ಭಾರತೀಯರಿಗಾಗಿ ಪ್ರಾಥಮಿಕ ಕಾನ್ಸುಲರ್ ಮತ್ತು ಶಿಷ್ಟಾಚಾರದ ಕರ್ತವ್ಯಗಳನ್ನು ನೆರವೇರಿಸುವುದರಿಂದ ಭಾರತೀಯ ರಾಯಭಾರ ಕಚೇರಿಯನ್ನು ತಡೆಯಲಾಗಿತ್ತು’’ ಎಂದು ಅಂದು ವಿದೇಶ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ್ದ ಹೇಳಿಕೆಯೊಂದು ತಿಳಿಸಿತ್ತು.

ಶನಿವಾರ ಕೂಡ ಭಾರತೀಯ ಯಾತ್ರಿಕರನ್ನು ಭೇಟಿಯಾಗಲು ಸಾಧ್ಯವಾಗದೆ ಹೈಕಮಿಶನರ್ ಬಿಸಾರಿಯ ಮರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News