ಟ್ರೂಡೊ ಭಾರತ ಪ್ರವಾಸಕ್ಕೆ ಅಪಾರ ವೆಚ್ಚ: ಪ್ರತಿಪಕ್ಷ ಕೆಂಡ

Update: 2018-06-23 17:24 GMT

ಟೊರಾಂಟೊ, ಜೂ. 23: ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಗೊಂದಲಭರಿತ ಭಾರತ ಪ್ರವಾಸಕ್ಕೆ 1.5 ಮಿಲಿಯ ಕೆನಡ ಡಾಲರ್ (ಸುಮಾರು 7.66 ಕೋಟಿ ರೂಪಾಯಿ) ವೆಚ್ಚವಾಗಿದೆ ಹಾಗೂ ವೆಚ್ಚವು ಹೆಚ್ಚುತ್ತಿದೆ.

ಅಂತಿಮ ವೆಚ್ಚ ಎಷ್ಟೆಂದು ಇನ್ನಷ್ಟೇ ನಿಗದಿಯಾಗಬೇಕಾಗಿದೆ. ಆದರೆ, ಅದು ಈಗಾಗಲೇ ಅವರ ಅಧಿಕಾರಾವಧಿಯ ಅತ್ಯಂತ ದುಬಾರಿ ಪ್ರವಾಸವಾಗಿ ಮಾರ್ಪಟ್ಟಿದೆ.

ಸಂಸತ್ತಿನಲ್ಲಿ ಮಂಡಿಸಿದ ದಾಖಲೆಗಳಲ್ಲಿ ವೆಚ್ಚ ವಿವರಗಳು ಬಹಿರಂಗವಾಗಿವೆ ಹಾಗೂ ತೆರಿಗೆದಾರರ ಹಣವನ್ನು ಸರಕಾರ ಪೋಲು ಮಾಡುತ್ತಿದೆ ಎಂಬುದಾಗಿ ಪ್ರತಿಪಕ್ಷಗಳು ಆರೋಪಿಸಿವೆ.

ಟ್ರೂಡೊ ಜನವರಿಯಲ್ಲಿ ಭಾರತದ ಉದ್ದಗಲಕ್ಕೆ 8 ದಿನಗಳ ಪ್ರವಾಸ ಕೈಗೊಂಡಿದ್ದರು. ಅವರು ಪ್ರಯಾಣಿಸಿದ ವಿಐಪಿ ವಿಮಾನದ ವೆಚ್ಚ 5 ಲಕ್ಷ ಕೆನಡ ಡಾಲರ್ (ಸುಮಾರು 2.55 ಕೋಟಿ ರೂಪಾಯಿ) ಆಗಿತ್ತು.

ಅವರ ತಂಡದ ಹೊಟೇಲ್ ವೆಚ್ಚ 3 ಲಕ್ಷ ಕೆನಡಿಯನ್ ಡಾಲರ್ (ಸುಮಾರು 1.53 ಕೋಟಿ ರೂಪಾಯಿ)ಗೂ ಅಧಿಕವಾಗಿತ್ತು.

ಆದರೆ, ವಿಶೇಷ ಕಾರ್ಯಕ್ರಮಗಳಲ್ಲಿ ಎರಡು ಊಟಗಳನ್ನು ತಯಾರಿಸುವುದಕ್ಕಾಗಿ ವ್ಯಾಂಕೂವರ್‌ನ ವಿಶೇಷ ಬಾಣಸಿಗರೊಬ್ಬರನ್ನು ಭಾರತಕ್ಕೆ ಕರೆದೊಯ್ಯಲು 17,000 ಕೆನಡ ಡಾಲರ್ (8.68 ಲಕ್ಷ ರೂಪಾಯಿ) ವೆಚ್ಚ ಮಾಡಿರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News