ವಿಶ್ವಕಪ್: ಇಂಗ್ಲೆಂಡ್‌ಗೆ 6-1 ಜಯ, ನಾಕೌಟ್‌ಗೆ ಲಗ್ಗೆ

Update: 2018-06-24 14:34 GMT

ನಿಝ್ನಿ ನೊವ್ಗೊರ್ಡ್, ಜೂ.24: ನಾಯಕ ಹ್ಯಾರಿ ಕೇನ್ ದಾಖಲಿಸಿದ ಹ್ಯಾಟ್ರಿಕ್ ಗೋಲು ನೆರವಿನಿಂದ ಇಂಗ್ಲೆಂಡ್ ತಂಡ ಪನಾಮ ವಿರುದ್ಧ ವಿಶ್ವಕಪ್‌ನ ‘ಜಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ 6-1 ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.

ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಹ್ಯಾರಿ ಕೇನ್ ಹ್ಯಾಟ್ರಿಕ್ ಗೋಲು ಬಾರಿಸಿದರೆ, ಜಾನ್ ಸ್ಟೋನ್ಸ್ ಎರಡು ಗೋಲು ಹೊಡೆದರು.

 ಮೊದಲಾರ್ಧದಲ್ಲಿ ಹಲವು ತಪ್ಪೆಸಗಿದ ಪನಾಮ ತಂಡದ ವಿರುದ್ಧ ಇಂಗ್ಲೆಂಡ್ ಐದು ಗೋಲುಗಳನ್ನು ಬಾರಿಸಿತು. ಹ್ಯಾರಿ ಕೇನ್ ದ್ವಿತೀಯಾರ್ಧದಲ್ಲಿ ಹ್ಯಾಟ್ರಿಕ್ ಪೂರೈಸಿದರು. ಪನಾಮ ಪರ ಬಲೊಯ್ ಏಕೈಕ ಗೋಲು ಬಾರಿಸಿದರು.

‘ಜಿ’ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯವನ್ನು ಜಯಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಇಂಗ್ಲೆಂಡ್ ವಿಶ್ವಕಪ್‌ನ ಅಂತಿಮ-16ರ ಸ್ಥಾನಕ್ಕೆ ತೇರ್ಗಡೆಯಾಗಿದೆ.

 ಸ್ಟೋನ್ಸ್ ಹಾಗೂ ಲಿಂಗಾರ್ಡ್ ಮೊದಲ 45 ನಿಮಿಷಗಳ ಆಟದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು. ಸ್ಟೋನ್ಸ್ 8ನೇ ಹಾಗೂ 40ನೇ ನಿಮಿಷದಲ್ಲಿ ಅವಳಿ ಗೋಲು ಬಾರಿಸಿದರು. ಲಿಂಗಾರ್ಡ್ 36ನೇ ನಿಮಿಷದಲ್ಲಿ ಗೋಲು ಹೊಡೆದರು. ನಾಯಕ ಕೇನ್ 22ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಮೊದಲ ಗೋಲು ಬಾರಿಸಿದರು. ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ(45+1) ಮತ್ತೊಂದು ಗೋಲು ಬಾರಿಸಿದರು. 62ನೇ ನಿಮಿಷದಲ್ಲಿ ಮೂರನೇ ಗೋಲು ಬಾರಿಸುವುದರೊಂದಿಗೆ ಹ್ಯಾಟ್ರಿಕ್ ಪೂರೈಸಿದರು.

78ನೇ ನಿಮಿಷದಲ್ಲಿ ಗೋಲು ಬಾರಿಸಿದ ಪನಾಮ ತಂಡದ ಫಿಲಿಪ್ ಬಲೊಯ್ ಇತಿಹಾಸ ನಿರ್ಮಿಸಿದರು. ಚೊಚ್ಚಲ ವಿಶ್ವಕಪ್ ಆಡುತ್ತಿರುವ ಪನಾಮ ಪರ ಫಿಲಿಪ್ ಮೊದಲ ಗೋಲು ಬಾರಿಸಿ ಗಮನ ಸೆಳೆದರು.

ಈ ಸೋಲಿನೊಂದಿಗೆ ಚೊಚ್ಚಲ ವಿಶ್ವಕಪ್‌ನಲ್ಲಿ ನಾಕೌಟ್ ಹಂತಕ್ಕೇರುವ ಪನಾಮ ತಂಡದ ಕನಸು ಈಡೇರಲಿಲ್ಲ. ಪನಾಮ ಜೂ.28 ರಂದು ಟ್ಯುನಿಶಿಯಾ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News