×
Ad

ವಲಸಿಗರಿಂದ ಮಕ್ಕಳನ್ನು ಬೇರ್ಪಡಿಸಬಾರದು: ಅಮೆರಿಕದ ಫೆಡರಲ್ ನ್ಯಾಯಾಲಯ ಆದೇಶ

Update: 2018-06-27 20:48 IST

ವಾಶಿಂಗ್ಟನ್, ಜೂ. 27: ಅಮೆರಿಕದ ವಲಸೆ ಅಧಿಕಾರಿಗಳು, ಮೆಕ್ಸಿಕೊ ಗಡಿಯನ್ನು ಅಕ್ರಮವಾಗಿ ದಾಟಿ ಅಮೆರಿಕಕ್ಕೆ ಬರುವ ವಲಸಿಗರಿಂದ ಮಕ್ಕಳನ್ನು ಬೇರ್ಪಡಿಸಬಾರದು ಎಂದು ಅಮೆರಿಕದ ಫೆಡರಲ್ ನ್ಯಾಯಾಧೀಶೆಯೊಬ್ಬರು ಮಂಗಳವಾರ ಆದೇಶ ನೀಡಿದ್ದಾರೆ.

ಅದೇ ವೇಳೆ, ಈಗಾಗಲೇ ಬೇರ್ಪಡಿಸಿರುವ ವಲಸಿಗ ಹೆತ್ತವರು ಮತ್ತು ಮಕ್ಕಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

 ಕುಟುಂಬಗಳನ್ನು ಬೇರ್ಪಡಿಸುವುದನ್ನು ತಡೆಯಬೇಕೆಂದು ಕೋರಿ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ಎಸಿಎಲ್‌ಯು) ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಡಾನಾ ಸ್ಯಾಬ್ರೊ, ಈ ತೀರ್ಪು ನೀಡಿದ್ದಾರೆ.

ಮೇ ತಿಂಗಳ ಆದಿ ಭಾಗದಲ್ಲಿ ಟ್ರಂಪ್ ಆಡಳಿತ ‘ಅಕ್ರಮ ವಲಸೆಗೆ ಶೂನ್ಯ ಸಹನೆ’ ನೀತಿಯನ್ನು ಜಾರಿಗೆ ತಂದ ಬಳಿಕ, 2,300ಕ್ಕೂ ಅಧಿಕ ವಲಸಿಗ ಮಕ್ಕಳನ್ನು ಅವರ ಹೆತ್ತವರಿಂದ ಬೇರ್ಪಡಿಸಿ ಶಿಶು ಕೇಂದ್ರಗಳಲ್ಲಿ ಇರಿಸಲಾಗಿದೆ. ಅದೇ ವೇಳೆ, ಹೆತ್ತವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಲಾಗಿದೆ.

‘‘ಸರಕಾರವು ತಾನೇ ನಿರ್ಮಿಸಿದ ಗೊಂದಲಕಾರಿ ಪರಿಸ್ಥಿತಿಗೆ ಈ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುವುದು ನ್ಯಾಯಾಲಯದ ಮುಂದಿಟ್ಟ ದಾಖಲೆಗಳಿಂದ ವೇದ್ಯವಾಗಿದೆ’’ ಎಂದು ನ್ಯಾಯಾಧೀಶೆ ತನ್ನ ತೀರ್ಪಿನಲ್ಲಿ ಬರೆದಿದ್ದಾರೆ.

‘‘ಸರಕಾರ ತೆಗೆದುಕೊಂಡಿರುವ ಕ್ರಮಗಳು ವ್ಯವಸ್ಥಿತ ಹಾಗೂ ನಿಯಂತ್ರಿತ ಆಡಳಿತವನ್ನು ಉಲ್ಲಂಘಿಸುತ್ತವೆ. ವ್ಯವಸ್ಥಿತ ಹಾಗೂ ನಿಯಂತ್ರಿತ ಆಡಳಿತವು ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಲಾದ ಸಹಜ ಪ್ರಕ್ರಿಯೆ ಕಲ್ಪನೆಗೆ ಮುಖ್ಯವಾಗಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News