ಮಲೇಷ್ಯಾ ಓಪನ್: ಒಲಿಂಪಿಕ್ಸ್ ಚಾಂಪಿಯನ್ ಮರಿನ್‌ಗೆ ಸಿಂಧು ಶಾಕ್

Update: 2018-06-29 13:17 GMT

ಕೌಲಾಲಂಪುರ, ಜೂ.29: ಭಾರತದ ಹಿರಿಯ ಶಟ್ಲರ್‌ಗಳಾದ ಕಿಡಂಬಿ ಶ್ರೀಕಾಂತ್ ಹಾಗೂ ಪಿ.ವಿ. ಸಿಂಧು ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಪಿ.ವಿ. ಸಿಂಧು ಒಲಿಂಪಿಕ್ಸ್ ಚಾಂಪಿಯನ್ ಸ್ಪೇನ್‌ನ ಕರೊಲಿನಾ ಮರಿನ್‌ರನ್ನು ಕೇವಲ 52 ನಿಮಿಷಗಳ ಹೋರಾಟದಲ್ಲಿ 22-20, 21-19 ನೇರ ಗೇಮ್‌ಗಳ ಅಂತರದಿಂದ ಸೋಲಿಸಿ ಶಾಕ್ ನೀಡಿದ್ದಾರೆ. ಈ ಗೆಲುವಿನೊಂದಿಗೆ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಸಿಂಧು ಶನಿವಾರ ನಡೆಯುವ ಸೆಮಿ ಫೈನಲ್‌ನಲ್ಲಿ ಚೈನೀಸ್ ತೈಪೆಯ ತೈ ಝು ಯಿಂಗ್‌ರನ್ನು ಎದುರಿಸಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು ಎರಡನೇ ಸುತ್ತಿನಲ್ಲಿ ಮಲೇಷ್ಯಾದ ಯಿಂಗ್ ಯಿಂಗ್ ಲೀ ಅವರನ್ನು 21-8, 21-14 ರಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಸಿಂಧು ಅವರು ಮರಿನ್ ವಿರುದ್ಧ 5-6 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ. ಮಲೇಷ್ಯಾ ಓಪನ್‌ನಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ನಾಲ್ಕನೇ ಶ್ರೇಯಾಂಕದ ಶ್ರೀಕಾಂತ್ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ನ ಬ್ರೈಸ್ ಲೆವಾರ್ಡೆಝ್‌ರನ್ನು 21-18, 21-14 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ. ಈ ವರ್ಷದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೀಕಾಂತ್ ಫ್ರಾನ್ಸ್ ಆಟಗಾರನನ್ನು ಸೋಲಿಸಿದ್ದರು.

25ರ ಹರೆಯದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಜಪಾನ್‌ನ ಕೆಂಟೊ ಮೊಮೊಟಾರನ್ನು ಎದುರಿಸಲಿದ್ದಾರೆ. ಮೊಮೊಟಾ ಪ್ರಸ್ತುತ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. 2018ರ ಏಶ್ಯಾ ಚಾಂಪಿಯನ್‌ಶಿಪ್‌ನ್ನು ಜಯಿಸಿರುವ ಮೊಮೊಟಾ ಥಾಮಸ್ ಕಪ್‌ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News