ಕುಂಟುತ್ತಾ ಸಾಗಿದ ಕವಾನಿಗೆ ನೆರವು ನೀಡಿದ ರೊನಾಲ್ಡೊ

Update: 2018-07-01 09:27 GMT

  ಮಾಸ್ಕೊ, ಜು.1:ಉರುಗ್ವೆಯ ಗೆಲುವಿನ ರೂವಾರಿ ಎಡಿನ್ಸನ್ ಕವಾನಿ ದಾಖಲಿಸಿದ ಎರಡು ಗೋಲುಗಳು ವಿಶ್ವಕಪ್ ಗೆಲ್ಲುವ ಪೋರ್ಚುಗಲ್‌ನ ಕನಸನ್ನು ಪ್ರಿ ಕ್ವಾರ್ಟರ್ ಫೈನಲ್‌ನಲ್ಲೇ ಕೊನೆಗೊಳಿಸಿತು. ಆದರೆ ಪೋರ್ಚುಗಲ್ ತಂಡದ ಅಭಿಮಾನಿಗಳಿಗೆ ವಿಲನ್ ಆಗಿ ಕಾಣಿಸಿಕೊಂಡ ಕವಾನಿಗೆ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ

ರೊನಾಲ್ಡೊ ನೆರವು ನೀಡುವ ಮೂಲಕ ಉರುಗ್ವೆಯ ಅಭಿಮಾನಿಗಳ ಮನ ಗೆದ್ದಿದ್ದಾರೆ.

  ಶನಿವಾರ ರಾತ್ರಿ ನಡೆದ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕವಾನಿ 7ನೇ ಮತ್ತು 62ನೇ ನಿಮಿಷದಲ್ಲಿ ದಾಖಲಿಸಿದ ಎರಡು ಗೋಲುಗಳು ಉರುಗ್ವೆಗೆ ಕ್ವಾರ್ಟರ್ ಫೈನಲ್‌ಗೇರಲು ನೆರವಾಯಿತು. ಆದರೆ ಎರಡನೇ ಗೋಲು ದಾಖಲಿಸಿದ ಬೆನ್ನಲ್ಲೇ ಕವಾನಿ ಗಾಯಗೊಂಡು ಕುಂಟುತ್ತಾ ನಡೆಯುವುದನ್ನು ನೋಡಿದ ಫುಟ್ಬಾಲ್ ಜಗತ್ತಿನ ಸೂಪರ್ ಸ್ಟಾರ್ ರೊನಾಲ್ಡೊ ಅವರ ನೆರವಿಗೆ ಧಾವಿಸಿದರು.

    ಕವಾನಿ ಅವಳಿ ಗೋಲಿನಿಂದ ರೋನಾಲ್ಡೊ ಆಘಾತಗೊಂಡಿದ್ದರೂ, ಅವರು ಎಲ್ಲವನ್ನು ಮರೆತು ಕ್ರೀಡಾಸ್ಪೂರ್ತಿ ಮೆರೆದರು. ಅವರ ಮನ ಕವಾನಿಗೆ ಮಿಡಿಯಿತು. ಗಾಯಗೊಂಡು ಕುಂಟುತ್ತಾ ಸಾಗುತ್ತಿದ್ದ ಕವಾನಿಗೆ ಕ್ರೀಡಾಂಗಣದಿಂದ ಹೊರಗೆ ಹೋಗಲು ನೆರವು ನೀಡಿ ಕೋಟ್ಯಂತರ ಮಂದಿ ಫುಟ್ಬಾಲ್ ಅಭಿಮಾನಿಗಳ ಮನ ಗೆದ್ದಿದ್ದಾರೆ ರೊನಾಲ್ಡೊ.

                                                                                                                                                                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News