ಹಾಕಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ
Update: 2018-07-01 21:36 IST
ಬ್ರೆಡಾ(ಹಾಲೆಂಡ್), ಜು.1: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಭಾರತವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 3-1 ಅಂತರದಿಂದ ಸೋಲಿಸಿದ ಆಸ್ಟ್ರೇಲಿಯ 15ನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ರವಿವಾರ ನಡೆದ ಫೈನಲ್‌ನಲ್ಲಿ ನಿಗದಿತ 60 ನಿಮಿಷ ಅವಧಿಯಲ್ಲಿ ಉಭಯ ತಂಡಗಳು 1-1 ರಿಂದ ಡ್ರಾ ಸಾಧಿಸಿದವು. ಆಸೀಸ್ ಪರ ಬ್ಲೇಕ್ ಗೋವರ್ಸ್(24ನೇ ನಿಮಿಷ) ಹಾಗೂ ಭಾರತದ ಪರ ವಿವೇಕ್ ಪ್ರಸಾದ್(42ನೇ ನಿ.) ತಲಾ ಒಂದು ಗೋಲು ಬಾರಿಸಿದರು.
ಪಂದ್ಯ ಡ್ರಾಗೊಂಡ ಕಾರಣ ಪೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು. 2016ರ ಆವೃತ್ತಿಯಲ್ಲೂ ಉಭಯ ತಂಡಗಳ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆಗ ಭಾರತ ಪೆನಾಲ್ಟಿಯಲ್ಲಿ ಸೋಲುಂಡಿತ್ತು.