ವಿಶ್ವಕಪ್‌ನಿಂದ ಅರ್ಜೆಂಟೀನ ನಿರ್ಗಮಿಸಿದರೂ ಮೆಸ್ಸಿ ವಿಶ್ವ ದಾಖಲೆ ..!
ಮಾಸ್ಕೊ, ಜು.4: ಫ್ರಾನ್ಸ್ ವಿರುದ್ಧ ವಿಶ್ವಕಪ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನ ಸೋತು ನಿರ್ಗಮಿಸಿದರೂ ತಂಡದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ 756 ನಿಮಿಷಗಳ ಆಟ ಆಡಿದ್ದರೂ, ಒಂದು ಗೋಲನ್ನು ದಾಖಲಿಸಲಿಲ್ಲ. ಆದರೆ ಅವರು ಗೋಲು ಗಳಿಸಲು ಅಸಿಸ್ಟ್ ಮಾಡುವಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಶನಿವಾರ ರಾತ್ರಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನ 3-4 ಅಂತರದಲ್ಲಿ ಸೋತು ನಿರ್ಗಮಿಸಿತ್ತು. 1986 , ಜೂ.29ರಂದು ಡಿಯಾಗೊ ಮರಡೋನಾ ನೇತೃತ್ವದ ಅರ್ಜೆಂಟೀನ ತಂಡ ಮೆಕ್ಸಿಕೊದಲ್ಲಿ ನಡೆದ ವಿಶ್ವಕಪ್‌ನ ಫೈನಲ್‌ನಲ್ಲಿ ಪಶ್ಚಿಮ ಜರ್ಮನಿಯನ್ನು 3-2 ಅಂತರದಲ್ಲಿ ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿತ್ತು. ಇದೇ ಸಾಧನೆಯನ್ನು ಸರಿಗಟ್ಟಲು ಮೆಸ್ಸಿ ಯೋಚಿಸಿದ್ದರು. ಅವರ ತಂಡ 2014ರಲ್ಲಿ ಅರ್ಜೆಂಟೀನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋತು ಎರಡನೇ ಸ್ಥಾನ ಪಡೆದಿತ್ತು.
ಈ ಬಾರಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್‌ನ ಕೈಲಾನ್ ಬಾಪೆ ಅವಳಿ ಗೋಲು ಜಮೆ ಮಾಡಿ ಅರ್ಜೆಂಟೀನವನ್ನು ಕೂಟದಿಂದ ಹೊರದಬ್ಬಲು ಫ್ರಾನ್ಸ್‌ಗೆ ನೆರವಾಗಿದ್ದರು.
ಮೆಸ್ಸಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಗೋಲು ದಾಖಲಿಸದಿದ್ದರೂ ಎರಡು ಗೋಲು ದಾಖಲಿಸಲು ನೆರವಾಗಿದ್ದರು. ದ್ವಿತೀಯಾರ್ಧದ 48ನೇ ನಿಮಿಷದಲ್ಲಿ ಗೇಬ್ರಿಯಲ್ ಮರ್ಕಾಡೊಗೆ ಗೋಲು ಗಳಿಸಲು ನೆರವಾಗಿದ್ದರು. ಇದು ಅರ್ಜೆಂಟೀನದ ಎರಡನೇ ಗೋಲು ಆಗಿತ್ತು. ಬಳಿಕ ಸೆರ್ಗುಯೊ ಅಗ್ಯುರೊಗೆ (90+3) ಗೋಲು ಗಳಿಸಲು ಅಸಿಸ್ಟ್ ಮಾಡಿದ್ದಾರೆ. ಇದರೊಂದಿಗೆ ಒಂದೇ ಪಂದ್ಯದಲ್ಲಿ ಎರಡು ಅಸಿಸ್ಟ್ ಮಾಡಿದ್ದರು.
2018ರ ವಿಶ್ವಕಪ್‌ನಲ್ಲಿ ಅರ್ಜೆಂಟೀನ ಪರ 5 ಗೋಲು ದಾಖಲಿಸಲು ಅಸಿಸ್ಟ್ ಮಾಡುವ ಮೂಲಕ ಮೆಸ್ಸಿ ದಾಖಲೆ ನಿರ್ಮಿಸಿದ್ದಾರೆ. ಈ ಮೊದಲು ಮರಡೋನಾ 1986ರಲ್ಲಿ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಎರಡು ಗೋಲುಗಳಿಗೆ ಅಸಿಸ್ಟ್ ಮಾಡಿದ್ದರು. ಈ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ.