ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
ಓಲ್ಡ್ ಟ್ರಾಫೋರ್ಡ್, ಜು.4: ಭಾರತದ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ 2,000 ರನ್ ಪೂರೈಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.
ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಮಂಗಳವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಕ್ರಿಕೆಟ್ ಪಂದ್ಯದ ವೇಳೆ ಕೊಹ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಕೊಹ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ 20 ಎಸೆತಗಳಲ್ಲಿ ಔಟಾಗದೆ 22 ರನ್ ಗಳಿಸಿದ್ದರು. ಕೊಹ್ಲಿ ಸೀಮಿತ ಓವರ್ ಕ್ರಿಕೆಟ್ ಪಂದ್ಯದಲ್ಲಿ 2,000 ರನ್ ತಲುಪಿದ ಭಾರತದ ಮೊದಲ ದಾಂಡಿಗ ಎನಿಸಿಕೊಂಡಿದ್ದಾರೆ. ತಾನಾಡಿದ 60ನೇ ಪಂದ್ಯದ 56ನೇ ಇನಿಂಗ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿರುವ ಕೊಹ್ಲಿ ನ್ಯೂಝಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್‌ಗಿಂತ ವೇಗವಾಗಿ(71 ಪಂದ್ಯ, 66 ಇನಿಂಗ್ಸ್)2,000 ರನ್ ಮೈಲುಗಲ್ಲು ತಲುಪಿದರು.
ನ್ಯೂಝಿಲೆಂಡ್‌ನ ಮಾರ್ಟಿನ್ ಗಪ್ಟಿಲ್(2,271), ಮೆಕಲಮ್ (2,140)ಹಾಗೂ ಪಾಕಿಸ್ತಾನದ ಶುಐಬ್ ಮಲಿಕ್(2,039) ಬಳಿಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಗಪ್ಟಿಲ್ 68 ಇನಿಂಗ್ಸ್‌ಗಳಲ್ಲಿ ಹಾಗೂ ಮಲಿಕ್ 92 ಇನಿಂಗ್ಸ್‌ಗಳಲ್ಲಿ 2,000 ರನ್ ಮೈಲುಗಲ್ಲು ತಲುಪಿದ್ದಾರೆ. ಮಲಿಕ್ ರವಿವಾರ ಝಿಂಬಾಬ್ವೆ ವಿರುದ್ಧ ಪಂದ್ಯದ ವೇಳೆ 2,000 ರನ್ ಪೂರೈಸಿದ್ದರು.
ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೂಡ 2,000 ರನ್ ಪೂರೈಸುವ ಹೊಸ್ತಿಲಲ್ಲಿದ್ದಾರೆ. ಶರ್ಮಾಗೆ ಈ ಮೈಲುಗಲ್ಲು ತಲುಪಲು ಇನ್ನು ಕೇವಲ 19 ರನ್ ಅಗತ್ಯವಿದೆ. ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಶರ್ಮಾ 2,000 ರನ್ ಪೂರೈಸುವ ಸಾಧ್ಯತೆಯಿದೆ.