×
Ad

ಆಸ್ಟ್ರೇಲಿಯ ವಿರುದ್ಧ ಟ್ವೆಂಟಿ-20 ಸರಣಿ ಗೆದ್ದ ಪಾಕ್

Update: 2018-07-08 20:00 IST

ಹರಾರೆ, ಜು.8: ಆರಂಭಿಕ ಆಟಗಾರ ಫಾಖರ್ ಝಮಾನ್ ಸಿಡಿಸಿದ ಜೀವನಶ್ರೇಷ್ಠ ಇನಿಂಗ್ಸ್(91 ರನ್)ನೆರವಿನಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ಧದ ತ್ರಿಕೋನ ಟ್ವೆಂಟಿ-20 ಸರಣಿಯ ಕೊನೆಯ ಪಂದ್ಯವನ್ನು ಗೆದ್ದುಕೊಂಡಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ರವಿವಾರ ಗೆಲ್ಲಲು 184 ರನ್ ಗುರಿ ಪಡೆದಿದ್ದ ಪಾಕ್ ತಂಡ ಝಮಾನ್(91,46 ಎಸೆತ)ಸಾಹಸದಿಂದ ಇನ್ನೂ 4 ಎಸೆತಗಳು ಬಾಕಿ ಇರುವಾಗ 4 ವಿಕೆಟ್ ನಷ್ಟದಲ್ಲಿ 187 ರನ್ ಗಳಿಸಿ ಗೆಲುವಿನ ದಡ ಸೇರಿತು.

  ಟಾಸ್ ಜಯಿಸಿದ ಆಸ್ಟ್ರೇಲಿಯ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿತು. ಆರಂಭಿಕ ಆಟಗಾರರಾದ ಡಿಆರ್ಕಿ ಶಾರ್ಟ್ (76 ರನ್, 53 ಎಸೆತ) ಹಾಗೂ ಆ್ಯರೊನ್ ಫಿಂಚ್(47)ಮೊದಲ ವಿಕೆಟ್‌ಗೆ 95 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು.

ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಪಾಕ್ ಕೇವಲ 2 ರನ್ ಗಳಿಸುವಷ್ಟರಲ್ಲಿ 2 ವಿಕೆಟ್‌ನ್ನು ಕಳೆದುಕೊಂಡು ಆರಂಭದಲ್ಲಿ ಸಂಕಷ್ಟ ಎದುರಿಸಿತ್ತು. ಆಗ ತಂಡಕ್ಕೆ ಆಸರೆಯಾದ ಝಮಾನ್ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 12 ಬೌಂಡರಿ ಹಾಗೂ 3 ಸಿಕ್ಸರ್‌ಗಳನ್ನು ಸಿಡಿಸಿ ಆಸ್ಟ್ರೇಲಿಯ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಝಮಾನ್‌ಗೆ ಶುಐಬ್ ಮಲಿಕ್(ಔಟಾಗದೆ 43)ಸಾಥ್ ನೀಡಿದರು.

ಪಾಕ್ ತಂಡ ಟ್ವೆಂಟಿ-20 ಇಂಟರ್‌ನ್ಯಾಶನಲ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಚೇಸಿಂಗ್ ಮಾಡಿತು. ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಸತತ 9ನೇ ಸರಣಿ ಗೆದ್ದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News