ಹಲವು ದಾಖಲೆ ಮುರಿದ ರೋಹಿತ್

Update: 2018-07-09 18:13 GMT

ಬ್ರಿಸ್ಟೋಲ್, ಜು.9: ಇಂಗ್ಲೆಂಡ್ ವಿರುದ್ಧದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ 56 ಎಸೆತಗಳಲ್ಲಿ ಅಜೇಯ ಶತಕ(100) ಸಿಡಿಸಿ ಭಾರತಕ್ಕೆ ಪಂದ್ಯ ಗೆಲ್ಲಿಸಿಕೊಟ್ಟ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಆಕರ್ಷಕ ಆಟದ ವೇಳೆ ಹಲವು ದಾಖಲೆ ಗಳನ್ನು ನಿರ್ಮಿಸಿದ್ದಾರೆ. ರೋಹಿತ್ ಅಂತರ್‌ರಾಷ್ಟ್ರೀಯ ಟ್ವೆಂಟಿ -20ಯಲ್ಲಿ ಮೂರನೇ ಶತಕ ಗಳಿಸುವ ಮೂಲಕ ನ್ಯೂಝಿಲೆಂಡ್‌ನ ಕಾಲಿನ್ ಮನ್ರೋ ಸ್ಥಾಪಿಸಿದ್ದ ವಿಶ್ವದಾಖಲೆ ಸರಿಗಟ್ಟಿದರು. ಈ ಅಪೂರ್ವ ಸಾಧನೆ ಮಾಡಿರುವ ಪ್ರಪ್ರಥಮ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ಅಲ್ಲದೆ ಟ್ವೆಂಟಿ -20ಯಲ್ಲಿ 2000ಕ್ಕೂ ಹೆಚ್ಚಿನ ರನ್ ಗಳಿಸಿರುವ ಭಾರತದ ದ್ವಿತೀಯ (ವಿಶ್ವದ ಐದನೇ)ಆಟಗಾರನಾಗಿದ್ದಾರೆ. ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಆಟಗಾರನಾಗಿದ್ದಾರೆ. ಟ್ವೆಂಟಿ -20ಯಲ್ಲಿ(ಐಪಿಎಲ್ ಸೇರಿ) ಈಗ ರೋಹಿತ್ ಖಾತೆಯಲ್ಲಿ ಐದು ಶತಕಗಳಿದ್ದು, ಅತ್ಯಧಿಕ ಶತಕ ಗಳಿಸಿದ ಏಶ್ಯಾದ ಆಟಗಾರ ಎನಿಸಿಕೊಂಡಿದ್ದಾರೆ. ವೆಸ್ಟ್‌ಇಂಡೀಸ್‌ನ ಕ್ರಿಸ್‌ಗೇಲ್ ಟ್ವೆಂಟಿ - 20ಯಲ್ಲಿ 21 ಶತಕ ಗಳಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೆ ಕ್ರಿಕೆಟ್‌ನ ಮೂರೂ ಪ್ರಕಾರಗಳಲ್ಲಿ (ಟ್ವೆಂಟಿ-20, ಏಕದಿನ, ಟೆಸ್ಟ್) ಮೂರು ಅಥವಾ ಹೆಚ್ಚಿನ ಶತಕ ಸಿಡಿಸಿದ ಏಕೈಕ ಆಟಗಾರನಾಗಿದ್ದಾರೆ ರೋಹಿತ್ ಶರ್ಮಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News