ಪ್ಯಾರಾ ಆರ್ಚರಿ: ಭಾರತಕ್ಕೆ ಚಾರಿತ್ರಿಕ ಸ್ವರ್ಣ
ಕೋಲ್ಕತಾ, ಜು.9: ಝೆಕ್ ಗಣರಾಜ್ಯದಲ್ಲಿ ನಡೆದ ಯುರೋಪಿ ಯನ್ ಪ್ಯಾರಾ ಆರ್ಚರಿ (ದೈಹಿಕ ಅಶಕ್ತರ ಬಿಲ್ಲುಸ್ಪರ್ಧೆ)ಕಪ್ ಎರಡನೇ ಹಂತದ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳು ಪ್ರಥಮ ಸ್ಥಾನ ಗಳಿಸುವುದರೊಂದಿಗೆ ದೇಶಕ್ಕೆ ಚಾರಿತ್ರಿಕ ಚಿನ್ನದ ಪದಕ ತಂದು ಕೊಟ್ಟಿದ್ದಾರೆ. ಭಾರತದ ಪ್ಯಾರಾ ಆರ್ಚರಿ ಸ್ಪರ್ಧಿ ಗಳಾದ ರಾಕೇಶ್ ಕುಮಾರ್, ಶ್ಯಾಮ್‌ಸುಂದರ್ ಸ್ವಾಮಿ ಹಾಗೂ ತಾರೀಫ್ ಅವರಿದ್ದ ತಂಡವು ಲೀಗ್‌ನಲ್ಲಿ ಎರಡನೇ ತಂಡವಾಗಿ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿತ್ತು. ಫೈನಲ್ ಸ್ಪರ್ಧೆಯಲ್ಲಿ ರೊಮಾನಿಯಾ ವಿರುದ್ಧ 224-207 ಅಂತರದಲ್ಲಿ ಜಯ ಸಾಧಿಸಿದ ತಂಡ ಜಕಾರ್ತಾದಲ್ಲಿ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ಪ್ಯಾರಾ ಏಶಿಯನ್ ಗೇಮ್ಸ್ ಸ್ಪರ್ಧೆಗೆ ಸಜ್ಜುಗೊಂಡಿದೆ. ಪ್ರಥಮ ಸುತ್ತಿನ ಬಳಿಕ ಭಾರತೀಯ ತಂಡವು 54-55ರಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ ಎರಡನೇ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ಐದು ಅಂಕಗಳ ಮುನ್ನಡೆ ಹಾಗೂ ತೃತೀಯ ಸುತ್ತಿನಲ್ಲಿ ಆರು ಅಂಕದ ಮುನ್ನಡೆ ಸಾಧಿಸಿತು. ಇದೇ ಆಟ ಮುಂದುವರಿಸಿದ ಭಾರತೀಯರು ಅಂತಿಮವಾಗಿ ಗೆಲುವಿನ ನಗೆ ಬೀರಿದರು. ಜಮ್ಮು ನಿವಾಸಿಯಾಗಿರುವ ರಾಕೇಶ್ ಅಪಘಾತಕ್ಕೀಡಾದ ಬಳಿಕ ಸೊಂಟದ ಕೆಳಭಾಗ ನಿಷ್ಕ್ರಿಯಗೊಂಡಿದೆ. ಪಾರ್ಶ್ವವಾಯುಗೆ ಒಳಗಾಗಿ ಒಂದು ಕೈ ನಿಷ್ಕ್ರಿಯಗೊಂಡಿರುವ ಶ್ಯಾಮ್‌ಸುಂದರ್ ಸ್ವಾಮಿ ಹಲ್ಲಿನ ಮೂಲಕ ಬಿಲ್ಲಿನ ಹುರಿಯನ್ನು ಎಳೆಯುತ್ತಾರೆ. ಒಂದು ಕಾಲು ಊನಗೊಂಡಿರುವ ಹರ್ಯಾಣದ ನಿವಾಸಿ ತಾರೀಫ್ ಬಿಲ್ಲಿಗೆ ಬಾಣ ಹೂಡಲು ಬಳಸುವ ತಂತ್ರ ವಿಶಿಷ್ಟವಾಗಿದೆ. ಪ್ರಥಮ ಸುತ್ತಿನಲ್ಲಿ ಬೈ ಪಡೆದಿದ್ದ ಭಾರತೀಯ ತಂಡ ದ್ವಿತೀಯ ಸುತ್ತಿನಲ್ಲಿ ಪೋಲಂಡ್ ಎದುರು 222-214 ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು.ಫ್ರಾನ್ಸ್ ಎದುರು ಸೆಮಿಫೈನಲ್‌ನಲ್ಲಿ ನಿಗದಿತ ಅವಧಿಯಲ್ಲಿ ಉಭಯ ತಂಡಗಳೂ 221ರಲ್ಲಿ ಸಮಬಲ ಸಾಧಿಸಿದ ಬಳಿಕ ಟೈಬ್ರೇಕರ್‌ನಲ್ಲಿ ಭಾರತೀಯರು 29-28ರ ರೋಚಕ ಜಯ ಸಾಧಿಸಿದ್ದರು. ಈ ಟೂರ್ನಿಗೆ ಭಾರತವು ಎಂಟು ಪುರುಷರು ಹಾಗೂ ಇಬ್ಬರು ಮಹಿಳೆಯರ ಸಹಿತ 10 ಸದಸ್ಯರ ತಂಡವನ್ನು ಕಳಿಸಿತ್ತು.