ಫೆಡರರ್‌ಗೆ ಆ್ಯಂಡರ್ಸನ್ ಶಾಕ್: ಜೊಕೊವಿಕ್ ಸೆಮಿಫೈನಲ್‌ಗೆ

Update: 2018-07-11 18:20 GMT

ಲಂಡನ್, ಜು.11: ಹಾಲಿ ಚಾಂಪಿಯನ್ ರೋಜರ್ ಫೆಡರರ್ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್‌ಗೆ ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್ ನ ಕ್ವಾರ್ಟರ್‌ಫೈನಲ್‌ನಲ್ಲಿ ಫೆಡರರ್ ಅವರು 6-2, 7-6(7/5),5-7,4-6,11-13 ಸೆಟ್‌ಗಳಿಂದ ಸೋತಿದ್ದಾರೆ. 4 ಗಂಟೆ, 13 ನಿಮಿಷಗಳ ಹೋರಾಟದಲ್ಲಿ ಆ್ಯಂಡರ್ಸನ್‌ಗೆ ಶರಣಾದ ಫೆಡರರ್ ಅವರ 9ನೇ ವಿಂಬಲ್ಡನ್ ಪ್ರಶಸ್ತಿ ಕನಸು ಭಗ್ನಗೊಂಡಿತು. ಫೆಡರರ್ 2013ರ ಬಳಿಕ ವಿಂಬಲ್ಡನ್‌ನಲ್ಲಿ ಬೇಗನೆ ನಿರ್ಗಮಿಸಿದರು. 2013ರಲ್ಲಿ 2ನೇ ಸುತ್ತಿನಲ್ಲಿ ಸೋತಿದ್ದರು. ಇದೇ ವೇಳೆ ಮತ್ತೊಂದು ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೊರಿಯವರನ್ನು 6-3, 3-6, 6-2, 6-2 ಸೆಟ್‌ಗಳಿಂದ ಸೋಲಿಸಿದ ಸರ್ಬಿಯದ ನೊವಾಕ್ ಜೊಕೊವಿಕ್ 2016ರ ಬಳಿಕ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

2011 ಹಾಗೂ 2016ರ ನಡುವೆ 24 ಪ್ರಮುಖ ಟೂರ್ನಿಗಳಲ್ಲಿ 22 ಬಾರಿ ಅಂತಿಮ-4ರ ಘಟ್ಟವನ್ನು ತಲುಪಿದ್ದ ಜೊಕೊವಿಕ್ ಎರಡು ವರ್ಷಗಳ ಬಳಿಕ ಮೊದಲ ಬಾರಿ ಫೈನಲ್‌ಗೆ ತಲುಪಲು ಎದುರು ನೋಡುತ್ತಿದ್ದಾರೆ. ಜೊಕೊವಿಕ್ ಮುಂದಿನ ಸುತ್ತಿನಲ್ಲಿ ರಫೆಲ್ ನಡಾಲ್ ಅಥವಾ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News