ಮತ್ತೊಂದು ಮೈಲುಗಲ್ಲು ತಲುಪಲು ಧೋನಿ ಸಜ್ಜು

Update: 2018-07-11 18:21 GMT

ಹೊಸದಿಲ್ಲಿ, ಜು.11: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಏಕದಿನ ಇತಿಹಾಸದಲ್ಲಿ 10,000 ರನ್ ಪೂರೈಸಿದ ವಿಶ್ವದ 12ನೇ ಕ್ರಿಕೆಟಿಗ ಎನಿಸಿಕೊಳ್ಳಲು ಧೋನಿಗೆ ಇನ್ನು ಕೇವಲ 33 ರನ್ ಅಗತ್ಯವಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿರುವ ಧೋನಿಗೆ ಎಲೈಟ್ ಕ್ಲಬ್ ಸೇರುವ ಅವಕಾಶ ಲಭಿಸಲಿದೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಏಕದಿನ ಸರಣಿ ಗುರುವಾರ ಆರಂಭವಾಗಲಿದೆ. ಧೋನಿ ಇನ್ನು 33 ರನ್ ಗಳಿಸಿದರೆ ಬ್ಯಾಟಿಂಗ್ ದಂತಕತೆಗಳಾದ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗುಲಿ ಅವರ ಇಲೈಟ್ ಕ್ಲಬ್‌ಗೆ ಸೇರಲಿದ್ದಾರೆ. ಧೋನಿ 10,000 ರನ್ ಗಳಿಸಿದ ಭಾರತದ ನಾಲ್ಕನೇ ಹಾಗೂ ವಿಶ್ವದ 12ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಏಕದಿನದಲ್ಲಿ 18,426 ರನ್ ಗಳಿಸಿರುವ ತೆಂಡುಲ್ಕರ್ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ(14,234), ಆಸ್ಟ್ರೇಲಿಯದ ರಿಕಿ ಪಾಂಟಿಂಗ್(13,704), ಶ್ರೀಲಂಕಾದ ಸನತ್ ಜಯಸೂರ್ಯ(13,430) ಹಾಗೂ ಮಹೇಲ ಜಯವರ್ಧನೆ(12,650), ಪಾಕ್‌ನ ಇಂಝಮಾಮ್ ಉಲ್‌ಹಕ್(11,739),ದಕ್ಷಿಣ ಆಫ್ರಿಕದ ಜಾಕ್ ಕಾಲಿಸ್(11,579), ಗಂಗುಲಿ(11,363), ದ್ರಾವಿಡ್(10,889), ವೆಸ್ಟ್‌ಇಂಡೀಸ್‌ನ ಬ್ರಿಯಾನ್ ಲಾರಾ(10,405) ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಶನ್(10,290) 10 ಸಾವಿರಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಆಟಗಾರರಾಗಿದ್ದಾರೆ. ಧೋನಿ 10 ಸಾವಿರ ರನ್ ಗಳಿಸಿದ ವಿಶ್ವದ ಎರಡನೇ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಸಂಗಕ್ಕರ ಈ ಸಾಧನೆ ಮಾಡಿದ ಮೊದಲ ವಿಕೆಟ್‌ಕೀಪರ್ ಬ್ಯಾಟ್ಸ್ ಮನ್ ಆಗಿದ್ದಾರೆ. ಧೋನಿ ಈಗಾಗಲೇ 297 ಕ್ಯಾಚ್ ಪಡೆದು ಸಾರ್ವಕಾಲಿಕ ಶ್ರೇಷ್ಠ ವಿಕೆಟ್‌ಕೀಪರ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ಆ್ಯಡಮ್ ಗಿಲ್‌ಕ್ರಿಸ್ಟ್(417), ದ.ಆಫ್ರಿಕದ ಮಾರ್ಕ್ ಬೌಚರ್(402) ಹಾಗೂ ಸಂಗಕ್ಕರ(383 ಕ್ಯಾಚ್‌ಗಳು)ಮೊದಲ 3 ಸ್ಥಾನದಲ್ಲಿದ್ದಾರೆ. 2011ರ ವಿಶ್ವಕಪ್ ವಿಜೇತ ನಾಯಕ ಧೋನಿ 318 ಏಕದಿನ ಪಂದ್ಯಗಳಲ್ಲಿ 107 ಸ್ಟಂಪಿಂಗ್ ಮಾಡಿದ್ದಾರೆ. ಸಂಗಕ್ಕರ(99 ಸ್ಟಂಪಿಂಗ್) ಎರಡನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News