ಫ್ರಾನ್ಸ್ ಗೆಲುವನ್ನು ಥಾಯ್ಲೆಂಡ್ ಮಕ್ಕಳಿಗೆ ಸಮರ್ಪಿಸಿದ ಪೊಗ್ಬಾ

Update: 2018-07-11 18:25 GMT

ಸೈಂಟ್ ಪೀಟರ್ಸ್‌ಬರ್ಗ್, ಜು.11: ಫ್ರಾನ್ಸ್ ತಂಡ ಬೆಲ್ಜಿಯಂ ವಿರುದ್ಧ ಸೆಮಿ ಫೈನಲ್ ಪಂದ್ಯವನ್ನು ಗೆದ್ದುಕೊಂಡು ಫೈನಲ್‌ಗೆ ತಲುಪಿರುವ ಸಾಧನೆಯನ್ನು ಥಾಯ್ಲೆಂಡ್‌ನ ಗುಹೆಯೊಳಗೆ 18 ದಿನಗಳ ಜೀವನ್ಮರಣ ಹೋರಾಟದಲ್ಲಿ ಜಯಶಾಲಿಯಾಗಿರುವ 12 ಫುಟ್ಬಾಲ್ ಬಾಲಕರಿಗೆ ಸಮರ್ಪಿಸುವೆ ಎಂದು ಫ್ರಾನ್ಸ್ ಆಟಗಾರ ಪೌಲ್ ಪೊಗ್ಬಾ ಹೇಳಿದ್ದಾರೆ. ಜೂ.23 ರಂದು ಫುಟ್ಬಾಲ್ ಅಭ್ಯಾಸದ ಬಳಿಕ ಕೋಚ್‌ರೊಂದಿಗೆ ಥಾಮ್‌ಲಾಂಗ್ ಗುಹೆ ಪ್ರವೇಶಿಸಿದ್ದ 12 ಮಕ್ಕಳು ಹಾಗೂ ತಂಡದ ಕೋಚ್‌ರನ್ನು ಜಗತ್ತಿನ ಪ್ರಮುಖ ಥಾಯ್ ನೇವಿ ಸೀಲ್ ಡೈವರ್‌ಗಳ ತಂಡ ರಕ್ಷಿಸುವಲ್ಲಿ ಯಶಸ್ವಿಯಾಗಿತ್ತು. ಮಂಗಳವಾರ ನೆರೆಯಿಂದ ಜಲಾವೃತವಾಗಿದ್ದ ಗುಹೆಯಿಂದ ಐವರು ಮಕ್ಕಳನ್ನು ಜೀವಂತವಾಗಿ ಹೊರತೆಗೆಯುವುದರೊಂದಿಗೆ ರಕ್ಷಣಾಕಾರ್ಯಾಚರಣೆಗೆ ತೆರೆ ಬಿದ್ದಿತ್ತು.

ಸೆಮಿ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿದ ಫ್ರಾನ್ಸ್ ಫೈನಲ್‌ಗೆ ಪ್ರವೇಶಿಸಿದ ಬಳಿಕ ಟ್ವೀಟ್ ಮಾಡಿದ ಮ್ಯಾಂಚೆಸ್ಟರ್ ಯುನೈಟೆಡ್ ಮಿಡ್ ಫೀಲ್ಡರ್ ಪೊಗ್ಬಾ, ‘‘ಈ ಗೆಲುವು ಥಾಯ್ಲೆಂಡ್‌ನ ಧೈರ್ಯಶಾಲಿ ಬಾಲಕರಿಗೆ ಸಂದಾಯವಾಗಲಿದೆ. ಬಾಲಕರೇ ನೀವು ತುಂಬಾ ಬಲಿಷ್ಠರಾಗಿದ್ದೀರಿ’’ ಎಂದು ಹೇಳಿದ್ದಾರೆ.

 ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ವೈಲ್ಡ್ ಬೋರ್ಸ್ ಫುಟ್ಬಾಲ್ ತಂಡದ ಸದಸ್ಯರನ್ನು ರವಿವಾರ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಆಹ್ವಾನಿಸಿದ್ದಾರೆ. ವೈದ್ಯಕೀಯ ಕಾರಣಕ್ಕಾಗಿ ಬಾಲಕರು ಮಾಸ್ಕೊಗೆ ತೆರಳುವ ಸ್ಥಿತಿಯಲ್ಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News