ಸಾಮಾನ್ಯ ರೈತನ ಮಗಳು ಈಗ ಓಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಟ್ರ್ಯಾಕ್ ಅಥ್ಲೀಟ್

Update: 2018-07-13 18:59 GMT

ಹೊಸದಿಲ್ಲಿ, ಜು.13: ಕೇವಲ 18 ತಿಂಗಳ ಹಿಂದೆ ಅಸ್ಸಾಂನ ಶಿವಸಾಗರದ ಅಂತರ್-ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೊದಲ ಬಾರಿ ಸ್ಪರ್ಧಾತ್ಮಕ ಓಟದಲ್ಲಿ ಭಾಗವಹಿಸಿದ್ದ 18ರ ಹರೆಯದ ಹಿಮಾ ದಾಸ್ ಅಥ್ಲೆಟಿಕ್ಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ನಾಗಾಂವ್ ಜಿಲ್ಲೆಯ ಧಿಂಗ್ ಗ್ರಾಮದ ಸಾಮಾನ್ಯ ರೈತನ ಪುತ್ರಿಯಾಗಿರುವ ದಾಸ್ ಜಾಗತಿಕ ಮಟ್ಟದ ಅಥ್ಲೆಟಿಕ್ಸ್ ಕೂಟದ ಟ್ರ್ಯಾಕ್ ಇವೆಂಟ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಫಿನ್‌ಲ್ಯಾಂಡ್‌ನ ತಾಂಪೆರೆಯಲ್ಲಿ ಶುಕ್ರವಾರ ನಡೆದ ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 400 ಮೀ. ಓಟದ ಫೈನಲ್‌ನಲ್ಲಿ ದಾಸ್ ಈ ಸಾಧನೆ ಮಾಡಿದ್ದಾರೆ.

400 ಮೀ. ಓಟದ ಫೈನಲ್‌ನಲ್ಲಿ ನಿಧಾನಗತಿಯ ಆರಂಭ ಪಡೆದಿದ್ದ ಹಿಮಾ ದಾಸ್ ಗುರಿ ತಲುಪಲು 80 ಮೀ. ಬಾಕಿಯಿರುವಾಗ ತನ್ನ ವೇಗವನ್ನು ಹೆಚ್ಚಿ ಸಿಕೊಂಡರು. 51.46 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನವನ್ನು ಗೆದ್ದುಕೊಂಡರು. ಪೊಲೆಂಡ್‌ನಲ್ಲಿ ನಡೆದಿದ್ದ 2016ರ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನ ಜಯಿಸಿದ್ದರು. ದಾಸ್ ಈ ಗೆಲುವಿನೊಂದಿಗೆ ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಭಾರತದ ಅಥ್ಲೀಟ್‌ಗಳಾದ ಸೀಮಾ ಪೂನಿಯಾ(2002ರಲ್ಲಿ ಡಿಸ್ಕಸ್ ಎಸೆತ, ಕಂಚು), ನವಜೀತ್ ಕೌರ್ ದಿಲ್ಲೊನ್(2014, ಕಂಚು, ಡಿಸ್ಕಸ್, ) ಹಾಗೂ ನೀರಜ್ ಚೋಪ್ರಾ(ಚಿನ್ನ, ಜಾವೆಲಿನ್) ಗುಂಪಿಗೆ ಸೇರ್ಪಡೆಯಾಗಿದ್ದಾರೆ.

ಹೀಟ್ಸ್ ಹಾಗೂ ಸೆಮಿ ಫೈನಲ್‌ನಲ್ಲಿ ವೇಗದ ಸಮಯದಲ್ಲಿ ಗುರಿ ತಲುಪಿದ್ದ ಹಿಮಾ ದಾಸ್ ಅಮೆರಿಕ ಹಾಗೂ ಜಮೈಕಾ ಆಟಗಾರರ ಪ್ರಾಬಲ್ಯವಿರುವ ಓಟದಲ್ಲಿ ಯಾವುದೇ ಒತ್ತಡವಿಲ್ಲದೇ ಆಡಿದ್ದಾರೆ.

 ಹಿಮಾ ಭತ್ತದ ಗದ್ದೆಯಲ್ಲಿ ಹುಡುಗರೊಂದಿಗೆ ಫುಟ್ಬಾಲ್ ಆಡುತ್ತಾ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಸ್ಥಳೀಯ ಕೋಚ್ ಸಲಹೆಯ ಮೇರೆಗೆ ಅಥ್ಲೆಟಿಕ್ಸ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ‘‘ಹಿಮಾ ದಾಸ್ ಕಡಿಮೆ ಬೆಲೆಯ ಶೂ ಧರಿಸಿ 100 ಹಾಗೂ 200 ಮೀ. ಓಟದಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಆಕೆ ಬಿರುಗಾಳಿ ವೇಗದಲ್ಲಿ ಓಡುತ್ತಾರೆ. ಈ ವಯಸ್ಸಿನಲ್ಲಿ ಇಂತಹ ಪ್ರತಿಭೆಯನ್ನು ನಾನು ನೋಡಿಲ್ಲ’’ ಎಂದು ಕ್ರೀಡಾ ಹಾಗೂ ಯುವ ಕಲ್ಯಾಣ ಇಲಾಖೆಯ ಅಥ್ಲೆಟಿಕ್ಸ್ ಕೋಚ್ ಕೂಡ ಆಗಿರುವ ನಿಪೊನ್ ಹೇಳಿದ್ದಾರೆ.

 ಗುವಾಹಟಿಯಿಂದ 140 ಕಿ.ಮೀ. ದೂರವಿರುವ ಹಳ್ಳಿಯ ನಿವಾಸಿ ಹಿಮಾ ದಾಸ್‌ರನ್ನು ಪಟ್ಟಣಕ್ಕೆ ಕರೆ ತಂದ ಕೋಚ್ ನಿಪೊನ್ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು. ಅಸ್ಸಾಂನಲ್ಲಿ ಅಥ್ಲೆಟಿಕ್ಸ್‌ಗೆ ಪ್ರತ್ಯೇಕ ವಿಭಾಗವಿಲ್ಲ. ಹಿಮಾ ಪ್ರತಿಭೆಯನ್ನು ನೋಡಿ ಅಧಿಕಾರಿಗಳು ಅಕಾಡಮಿಯನ್ನು ತೆರೆದು ಆಕೆಯ ಬೆಂಬಲಕ್ಕೆ ನಿಂತಿದ್ದರು.

ಹಿಮಾ ದಾಸ್‌ಗೆ ಅಭಿನಂದನೆಗಳ ಮಹಾಪೂರ

ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಅಥ್ಲೀಟ್ ಆಗಿರುವ ಹಿಮಾ ದಾಸ್‌ಗೆ ರಾಷ್ಟ್ರಪತಿ, ಪ್ರಧಾನಮಂತ್ರಿ, ಕ್ರೀಡಾ ಸಚಿವರು ಹಾಗೂ ಇತರ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

 ‘‘ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ 400 ಮೀ. ಓಟದಲ್ಲಿ ಚಿನ್ನ ಗೆದ್ದುಕೊಂಡಿರುವ ಓಟದ ತಾರೆ ಹಿಮಾ ದಾಸ್‌ಗೆ ಅಭಿನಂದನೆಗಳು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಟ್ರಾಕ್‌ನಲ್ಲಿ ಗೆದ್ದ ಮೊದಲ ಚಿನ್ನದ ಪದಕ ಇದಾಗಿದೆ. ಇದು ಅಸ್ಸಾಂ ಹಾಗೂ ಭಾರತಕ್ಕೆ ಹೆಮ್ಮೆಯ ಕ್ಷಣಕ್ಕೆ ಕಾರಣವಾಗಿದೆ’’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

  ‘‘ವಿಶ್ವದ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚಿನ್ನ ಜಯಿಸಿರುವ ಅಥ್ಲೀಟ್ ಹಿಮಾ ದಾಸ್ ಕುರಿತು ಭಾರತಕ್ಕೆ ಸಂತೋಷ ಹಾಗೂ ಹೆಮ್ಮೆಯಾಗುತ್ತಿದೆ. ಹಿಮಾಗೆ ಅಭಿನಂದನೆಗಳು. ಅವರ ಈ ಸಾಧನೆ ದೇಶದ ಯುವ ಆಟಗಾರರಿಗೆ ಖಂಡಿತವಾಗಿಯೂ ಸ್ಫೂರ್ತಿಯಾಗಲಿದೆ’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ‘‘ವಿಶ್ವ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ 400 ಮೀ.ಓಟದಲ್ಲಿ ಚಿನ್ನದ ಪದಕ ಜಯಿಸಿರುವ ಹಿಮಾದಾಸ್ ಇತಿಹಾಸ ನಿರ್ಮಿಸಿದ್ದಾರೆ. ಅಂಡರ್-20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟ್ರಾಕ್ ಇವೆಂಟ್‌ನಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಹಿಮಾ ದೇಶಕ್ಕೆ ಹೆಮ್ಮೆ ತಂದಿದ್ದಾರೆ’’ ಎಂದು ಕೇಂದ್ರ ಯುವಜನ ಹಾಗೂ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್ ಹೇಳಿದ್ದಾರೆ. ‘‘ಅಸಾಮಾನ್ಯ ಸಾಧನೆ ತೋರಿದ ಹಿಮಾ ದಾಸ್‌ಗೆ ನನ್ನ ಸೆಲ್ಯೂಟ್. ಆಕೆ ಮಾಡಿದ ಸಾಧನೆ ಅತ್ಯಮೋಘ. ನಮಗೆಲ್ಲರಿಗೂ ಆಕೆ ಹೆಮ್ಮೆ ತಂದಿದ್ದಾರೆ’’ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಾಲಿವುಡ್ ತಾರೆಯರಾದ ಅಮಿತಾಭ್ ಬಚ್ಚನ್, ಶಾರೂಕ್‌ಖಾನ್, ಅಕ್ಷಯ್ ಕುಮಾರ್ ಹಾಗೂ ಫರ್ಹಾನ್ ಅಖ್ತರ್ ಸಹಿತ ಇತರರು ಹಿಮಾ ದಾಸ್ ಸಾಧನೆಯನ್ನು ಕೊಂಡಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News