ರಾಷ್ಟ್ರಗೀತೆ ಕೇಳಿ ಕಣ್ಣೀರಿಟ್ಟ ಅಸ್ಸಾಂ ಓಟಗಾರ್ತಿ ಹಿಮಾ ದಾಸ್

Update: 2018-07-14 07:31 GMT

ಹೊಸದಿಲ್ಲಿ, ಜು.14: ಅಸ್ಸಾಂನ 18ರ ಹರೆಯದ ಓಟಗಾರ್ತಿ ಹಿಮಾ ದಾಸ್ ಗುರುವಾರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಪದಕ ಸ್ವೀಕಾರ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮೊಳಗಿದಾಗ ಹಿಮಾ ಕಣ್ಣಲ್ಲಿ ನೀರು ಹರಿದುಬಂದಿತ್ತು.

ಈ ದೃಶ್ಯವನ್ನು ಮಹಿಂದ್ರಾ ಗ್ರೂಪ್‌ನ ಚೇರ್ಮನ್ ಆನಂದ್ ಮಹಿಂದ್ರಾ ತನ್ನ ಟ್ವೀಟರ್ ಪೇಜ್‌ನಲ್ಲಿ ಹಾಕಿದ್ದಾರೆ.

‘‘ಇದು ನಿಮ್ಮ ಹೃದಯ ತಟ್ಟದಿದ್ದರೆ, ಮತ್ತ್ಯಾವುದು ನಿಮ್ಮನ್ನು ಏನೂ ಮಾಡದು’’ ಎಂದು ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.

‘‘ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನ್ನ ಕೋಚ್‌ಗಳು ಹಾಗೂ ಹೆತ್ತವರಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ನನ್ನ ಗೆಲುವಿನ ಹಿಂದೆ ಅವರ ಶಕ್ತಿಯಿತ್ತು’’ಎಂದು ಹಿಮಾ ದಾಸ್ ಹೇಳಿದ್ದಾರೆ.

 ನಾಗಾಂಗ್ ಜಿಲ್ಲೆಯ ಧಿಂಗ್ ಹಳ್ಳಿಯೊಂದರ ರೈತನ ಮಗಳಾಗಿರುವ ಹಿಮಾ ದಾಸ್ ಐಎಸ್‌ಎಸ್‌ಎಫ್ ವರ್ಲ್ಡ್ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 400 ಮೀ. ಓಟದಲ್ಲಿ 51.46 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದಿದ್ದರು. ರೊಮಾನಿಯದ ಅಂಡ್ರಿಯ ಮಿಕ್ಲೊಸ್ ಹಾಗೂ ಅಮೆರಿಕದ ಟೇಲರ್ ಮಾನ್ಸನ್‌ರನ್ನು ಹಿಂದಿಕ್ಕಿದ್ದ ಹಿಮಾ ಚಿನ್ನ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News