ಯುದ್ಧದಲ್ಲಿ ಬದುಕುಳಿದ ನಿರಾಶ್ರಿತ ಈಗ ಕ್ರೊಯೇಶಿಯ ಫುಟ್ಬಾಲ್ ನಾಯಕ

Update: 2018-07-14 09:35 GMT

  ಮಾಸ್ಕೊ, ಜು.14: ಕ್ರೊಯೇಶಿಯ ಯುದ್ದದಲ್ಲಿ ಬದುಕುಳಿದಿದ್ದ ನಿರಾಶ್ರಿತ ಲುಕಾ ಮೊಡ್ರಿಕ್ ಈಗ ಪ್ರತಿಷ್ಠಿತ ವಿಶ್ವಕಪ್ ಫೈನಲ್‌ನಲ್ಲಿ ಫುಟ್ಬಾಲ್ ತಂಡದ ನಾಯಕನಾಗಿದ್ದಾರೆ. ಕ್ರೊಯೇಶಿಯ ನಾಯಕ ತನ್ನ ಜೀವನದುದ್ದಕ್ಕೂ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ಮಿಡ್‌ಫೀಲ್ಡರ್ ಮೊಡ್ರಿಕ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಲ್ಲದೆ, ಇದೀಗ ಮೊದಲ ಬಾರಿ ಫೈನಲ್‌ಗೆ ತಲುಪಿರುವ ಕ್ರೊಯೇಶಿಯ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.

ಯುದ್ದದ ಸಮಯದಲ್ಲಿ ಸರ್ಬಿಯ ಆಕ್ರಮಣಕಾರರಿಂದ ತಪ್ಪಿಸಿಕೊಂಡು ಕ್ರೊಯೇಶಿಯಕ್ಕೆ ನಿರಾಶ್ರಿತರಾಗಿ ಬಂದಿದ್ದ ಕುಟುಂಬದಲ್ಲಿ ಜನಿಸಿರುವ ಮೊಡ್ರಿಕ್ ತಾಯಿ ಜವಳಿ ಕಾರ್ಮಿಕರಾಗಿದ್ದರು. ತಂದೆ ಯುದ್ದದ ವೇಳೆ ಕ್ರೊಯೇಶಿಯ ಸೈನಿಕರ ಕಾರುಗಳ ರಿಪೇರಿ ಮಾಡುವ ಮೆಕಾನಿಕ್ ಆಗಿದ್ದರು. ಸರ್ಬಿಯ ಸೇನೆಯಿಂದ ಹತರಾದ ಅಜ್ಜ ಲುಕಾ ನೆನಪಿಗಾಗಿ ಮೊಡ್ರಿಕ್‌ಗೆ ಲುಕಾ ಮೊಡ್ರಿಕ್ ಎಂದು ಹೆಸರಿಡಲಾಗಿತ್ತು.

 ಮೊಡ್ರಿಡ್ ಕ್ರೊವೇಶಿಯಕ್ಕೆ ನಿರಾಶ್ರಿತರಾಗಿ ಬಂದಾಗ  ಆರು ವರ್ಷ ಬಾಲಕನಾಗಿದ್ದರು. ಯುದ್ದದ ಸಮಯದಲ್ಲಿ ಮೊಡ್ರಿಕ್ ಹಾಗೂ ಅವರ ಕುಟುಂಬ ಸದಸ್ಯರು ಝಾದರ್ ಪಟ್ಟಣದ ಹೊಟೇಲ್‌ವೊಂದರಲ್ಲಿ ವಾಸವಾಗಿದ್ದರು. ಬಾಲ್ಕನ್ ಯುದ್ಧ ಮುಂದುವರಿದ ಕಾರಣ ಮೊಡ್ರಿಕ್ ಚಿಕ್ಕಂದಿನಲ್ಲೇ ಗ್ರೆನೇಡ್ ಹಾಗೂ ಬುಲೆಟ್‌ಗಳ ಸದ್ದುಗಳ ನಡುವೆ ಬೆಳೆದಿದ್ದರು.

ಮೊಡ್ರಿಕ್ ವಾಸಿಸುತ್ತಿದ್ದ ಹೊಟೇಲ್‌ನಲ್ಲಿ ನೀರು ಹಾಗೂ ವಿದ್ಯುತ್ ಬೆಳಕಿರಲಿಲ್ಲ. ಮೊಡ್ರಿಕ್ ತಂದೆ ಮೆಕಾನಿಕ್ ಕೆಲಸವನ್ನು ಮುಂದುವರಿಸುತ್ತಾ ಮಗನಿಗೆ ಫುಟ್ಬಾಲ್ ಆಟಗಾರನಾಗಲು ಬೇಕಾದ ಸೌಲಭ್ಯ ಒದಗಿಸಿಕೊಟ್ಟಿದ್ದರು.

‘‘ಯುದ್ದ ಆರಂಭವಾದಾಗ ನಾವು ನಿರಾಶ್ರಿತರಾಗಿದ್ದೆವು. ಅದು ನಿಜವಾಗಿಯೂ ಕಠಿಣ ಸಮಯವಾಗಿತ್ತು. ಆಗ ನನಗೆ ಆರು ವರ್ಷವಾಗಿತ್ತು. ನನಗೆ ಯುದ್ಧದ ನೆನಪು ಸ್ಪಷ್ಟವಾಗಿದೆ. ನಾವು ಹೊಟೇಲ್‌ನಲ್ಲಿ ಬಹಳಷ್ಟು ಕಾಲ ನೆಲೆಸಿದ್ದೆವು. ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದೆವು. ಕಷ್ಟದ ನಡುವೆಯೂ ನಾನು ಫುಟ್ಬಾಲ್‌ನ್ನು ತುಂಬಾ ಇಷ್ಟಪಡುತ್ತಿದ್ದೆ. ನಾನು ಧರಿಸಿದ್ದ ಮೊದಲ ಪ್ಯಾಡ್‌ನಲ್ಲಿ ಬ್ರೆಝಿಲ್‌ನ ರೊನಾಲ್ಡಿನೊ ಚಿತ್ರವಿತ್ತು. ನಾನು ಅವರನ್ನು ತುಂಬಾ ಇಷ್ಟಪಡುತ್ತಿದ್ದೆ. ಯುದ್ದ ನನ್ನನ್ನು ಬಲಿಷ್ಠವಾಗಿಸಿತು. ಅದು ನನ್ನ ಹಾಗೂ ಕುಟುಂಬದವರಿಗೆ ತುಂಬಾ ನೋವು ನೀಡಿದೆ. ಅದನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ’’ ಎಂದು ಮೊಡ್ರಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News