ನವಾಝ್ ಶರೀಫ್, ಮರ್ಯಮ್‌ಗೆ ಜೈಲಿನಲ್ಲಿ ‘ಬಿ’ ದರ್ಜೆಯ ಸೌಲಭ್ಯ

Update: 2018-07-14 17:06 GMT

ಇಸ್ಲಾಮಾಬಾದ್, ಜು. 14: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಮತ್ತು ಅವರ ಪುತ್ರಿ ಮರ್ಯಮ್‌ರನ್ನು ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಇಡಲಾಗಿದ್ದು, ‘ಬಿ’ ದರ್ಜೆಯ ಸೌಲಭ್ಯಗಳನ್ನು ನೀಡಲಾಗಿದೆ.

ಏವನ್‌ಫೀಲ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಅವರ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶರೀಫ್ (68)ಗೆ 10 ವರ್ಷ ಮತ್ತು ಮರ್ಯಮ್ (44)ಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ಬಂಧನದ ಬಳಿಕ ಶರೀಫ್ ಮತ್ತು ಮರ್ಯಮ್‌ರನ್ನು ವಿಶೇಷ ವಿಮಾನದಲ್ಲಿ ಇಸ್ಲಾಮಾಬಾದ್‌ಗೆ ಕರೆದೊಯ್ಯಲಾಯಿತು. ಬಳಿಕ, ಅವರನ್ನು ಪ್ರತ್ಯೇಕ ವಾಹನಗಳಲ್ಲಿ ಅಡಿಯಾಲ ಜೈಲಿಗೆ ಕರೆದುಕೊಂಡು ಹೋಗಲಾಯಿತು.

ನಿಯಮಗಳ ಪ್ರಕಾರ, ಸಾಮಾಜಿಕ ಸ್ಥಾನಮಾನ, ಶಿಕ್ಷಣ ಅಥವಾ ಜೀವನ ಶೈಲಿಯ ಮೂಲಕ ಉನ್ನತ ದರ್ಜೆಯ ಬದುಕಿಗೆ ಹೊಂದಿಕೊಂಡವರಿಗೆ ‘ಬಿ’ ದರ್ಜೆಯ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ‘ನ್ಯೂಸ್’ ವರದಿ ಮಾಡಿದೆ.

‘ಎ’ ಮತ್ತು ‘ಬಿ’ ದರ್ಜೆಯ ಕೈದಿಗಳ ಕೋಣೆಗಳಲ್ಲಿ ಸಾಮಾನ್ಯವಾಗಿ ಮಂಚ, ಕುರ್ಚಿ, ಚಹಾ ಮಡಿಕೆ, ವಿದ್ಯುತ್ ಹೋದರೆ ಉಪಯೋಗಿಸಲು ಲಾಟೀನು, ಕಪಾಟು, ತೊಳೆಯುವ ಮತ್ತು ಸ್ವಚ್ಛತೆಯ ಸಲಕರಣೆಗಳಿರುತ್ತವೆ.

ಈ ಕೋಣೆಗಳಲ್ಲಿ ಜೈಲು ಇಲಾಖೆಯ ಅನುಮತಿಯೊಂದಿಗೆ ಟಿವಿ, ವಾತಾನುಕೂಲಿ, ಫ್ರಿಜ್ ಮತ್ತು ಪತ್ರಿಕೆಗಳನ್ನು ಒದಗಿಸಲು ಅವಕಾಶವಿದೆ. ಆದರೆ, ಈ ಸೌಲಭ್ಯಗಳ ಖರ್ಚನ್ನು ಕೈದಿಗಳೇ ಭರಿಸಬೇಕಾಗುತ್ತದೆ.

ಅಡಿಯಾಲ ಜೈಲಿನಲ್ಲೇ ವಿಚಾರಣೆ

ನವಾಝ್ ಶರೀಫ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಫ್ಲಾಗ್‌ಶಿಪ್ ಇನ್‌ವೆಸ್ಟ್‌ಮೆಂಟ್ಸ್ ಮತ್ತು ಅಲ್ ಅಝೀಝಿಯ ಸ್ಟೀಲ್ ಮಿಲ್ಸ್ ಭ್ರಷ್ಟಾಚಾರ ಮೊಕದ್ದಮೆಗಳ ವಿಚಾರಣೆಯನ್ನು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಅಡಿಯಾಲ ಜೈಲಿನಲ್ಲೇ ನಡೆಸುತ್ತದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ.

ಮೂರು ಬಾರಿಯ ಪ್ರಧಾನಿ ಹಾಗೂ ಅವರ ರಾಜಕೀಯ ಉತ್ತರಾಧಿಕಾರಿಯ ಜೈಲುವಾಸಕ್ಕೆ ಶುಕ್ರವಾರ ರಾತ್ರಿ ವಾರಂಟ್‌ಗಳನ್ನು ಹೊರಡಿಸಿದ ಇಸ್ಲಾಮಾಬಾದ್‌ನ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಬಶೀರ್ ಈ ಮೊಕದ್ದಮೆಯ ವಿಚಾರಣೆಯನ್ನು ಜೈಲಿನಲ್ಲೇ ನಡೆಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News