ಚುನಾವಣೆಯಲ್ಲಿ ಹಸ್ತಕ್ಷೇಪ ಪ್ರಕರಣ: 12 ರಶ್ಯ ಗುಪ್ತಚರ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ
ವಾಶಿಂಗ್ಟನ್, ಜು. 14: 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗೆ ಸಹಾಯ ಮಾಡುವುದಕ್ಕಾಗಿ ಡೆಮಾಕ್ರಟಿಕ್ ಪಕ್ಷ ಮತ್ತು ಅದರ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರ ಕಂಪ್ಯೂಟರ್‌ಗಳಿಗೆ ಕನ್ನ ಹಾಕಿದ ಆರೋಪಗಳನ್ನು ರಶ್ಯದ 12 ಗುಪ್ತಚರ ಅಧಿಕಾರಿಗಳ ವಿರುದ್ಧ ಶುಕ್ರವಾರ ಹೊರಿಸಲಾಗಿದೆ.
ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ನಿಗದಿತ ಶೃಂಗ ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ಈ ಬೆಳವಣಿಗೆ ಸಂಭವಿಸಿದೆ.
‘‘ಅಮೆರಿಕದ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪದ ವಿಷಯ ಬಂದಾಗ, ರಿಪಬ್ಲಿಕನ್ನರು ಅಥವಾ ಡೆಮಾಕ್ರಟ್‌ಗಳು ಎಂಬುದಾಗಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಬದಲಿಗೆ, ಅಮೆರಿಕನ್ನರು ಎಂಬ ರಾಷ್ಟ್ರಭಕ್ತಿಯಿಂದ ಯೋಚಿಸಬೇಕು. ಯಾರಿಗೆ ಅನ್ಯಾಯವಾಗಿದೆ ಎಂಬ ಆಧಾರದಲ್ಲಿ ನಮ್ಮ ಪ್ರತಿಕ್ರಿಯೆ ಇರಬಾರದು’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪ ಅಟಾರ್ನಿ ಜನರಲ್ ರಾಡ್ ರೋಸನ್‌ಸ್ಟೀನ್ ಹೇಳಿದರು.
ಇದೇ ಪತ್ರಿಕಾಗೋಷ್ಠಿಯಲ್ಲಿ ರಶ್ಯದ ಗುಪ್ತಚರ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಿರುವುದನ್ನು ಅವರು ಘೋಷಿಸಿದರು.