ಸೆರೆನಾಗೆ 24ನೇ ಪ್ರಶಸ್ತಿ ನಿರಾಕರಿಸಿದ ಕೆರ್ಬರ್ ವಿಂಬಲ್ಡನ್ ಚಾಂಪಿಯನ್

Update: 2018-07-14 17:43 GMT

ಲಂಡನ್, ಜು.14: ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ಗೆ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ನಿರಾಕರಿಸಿದರು.

ಶನಿವಾರ ಸೆಂಟರ್‌ಕೋರ್ಟ್‌ನಲ್ಲಿ 1 ಗಂಟೆ, 5 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ 11ನೇ ಶ್ರೇಯಾಂಕದ ಕೆರ್ಬರ್ ಹಿರಿಯ ಆಟಗಾರ್ತಿ ಸೆರೆನಾರನ್ನು 6-3, 6-3 ನೇರ ಸೆಟ್‌ಗಳಿಂದ ಸೋಲಿಸಿದರು.

30ರ ಹರೆಯದ ಕೆರ್ಬರ್ ಇದೀಗ ಮೂರನೇ ಗ್ರಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ. 2016ರಲ್ಲಿ ಆಸ್ಟ್ರೇಲಿಯನ್ ಹಾಗೂ ಅಮೆರಿಕನ್ ಓಪನ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು. 2016ರಲ್ಲಿ ವಿಂಬಲ್ಡನ್ ಫೈನಲ್‌ನಲ್ಲಿ ಸೆರೆನಾಗೆ ಶರಣಾಗಿದ್ದ ಕೆರ್ಬರ್ ಈಗ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡರು.

 ನಡಾಲ್‌ಗೆ ಸೋಲುಣಿಸಿದ ಜೊಕೊವಿಕ್ ಫೈನಲ್‌ಗೆ: ಸರ್ಬಿಯದ ನೊವಾಕ್ ಜೊಕೊವಿಕ್ ಸ್ಪೇನ್‌ನ ರಫೆಲ್ ನಡಾಲ್‌ರನ್ನು ಐದು ಸೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಐದನೇ ಬಾರಿ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶನಿವಾರ ಮುಂದುವರಿದ ಪುರುಷರ ಸಿಂಗಲ್ಸ್‌ನ 2ನೇ ಸೆಮಿ ಫೈನಲ್‌ನಲ್ಲಿ 12ನೇ ಶ್ರೇಯಾಂಕದ ಜೊಕೊವಿಕ್ ಅವರು ವಿಶ್ವದ ನಂ.1 ಆಟಗಾರ ನಡಾಲ್‌ರನ್ನು 6-4, 3-6,7-6(9), 3-6, 10-8 ಸೆಟ್‌ಗಳಿಂದ ಮಣಿಸಿದರು.

ನಡಾಲ್-ಜೊಕೊವಿಕ್ ನಡುವೆ ಶುಕ್ರವಾರ ಆರಂಭವಾದ ಸೆಮಿ ಫೈನಲ್ ಪಂದ್ಯವನ್ನು ಶನಿವಾರ ಮುಂದುವರಿಸಲಾಯಿತು. ಸುಮಾರು 5 ಗಂಟೆ, 15 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಜಯ ಸಾಧಿಸಿರುವ ಜೊಕೊವಿಕ್ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News