ಪುಟಿನ್ ರನ್ನು ನಂಬಿ ತನ್ನದೇ ಗುಪ್ತಚರ ಸಂಸ್ಥೆಗಳನ್ನು ಪ್ರಶ್ನಿಸಿದ ಟ್ರಂಪ್

Update: 2018-07-17 18:03 GMT

ವಾಶಿಂಗ್ಟನ್, ಜು. 17: ಸೋಮವಾರ ಅಮೆರಿಕದ ಸುದೀರ್ಘ ಕಾಲದ ಶತ್ರುವನ್ನು ಅಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆ ಎಂಬ ತನ್ನದೇ ಗುಪ್ತಚರ ಸಂಸ್ಥೆಗಳ ವರದಿಗಳನ್ನು ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ ಹಾಗೂ ರಶ್ಯ ಹಸ್ತಕ್ಷೇಪ ನಡೆಸಿಲ್ಲ ಎಂಬ ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಮಾತುಗಳನ್ನು ನಂಬಿರುವ ಸೂಚನೆಯನ್ನು ನೀಡಿದ್ದಾರೆ.

ಆದರೆ, ಇದಕ್ಕೆ ಸ್ವದೇಶದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಟ್ರಂಪ್‌ರ ರಿಪಬ್ಲಿಕನ್ ಪಕ್ಷದ ಸಹವರ್ತಿಗಳು ಮತ್ತು ಎಂದಿನ ಟ್ರಂಪ್ ಟೀಕಾಕಾರರು ಹರಿಹಾಯ್ದಿದ್ದಾರೆ.

‘‘ಅವಮಾನಕರ’’, ‘‘ಅನಪೇಕ್ಷಿತ’’ ಮತ್ತು ‘‘ದುರ್ಬಲ’’ ಎಂಬುದಾಗಿ ಅವರು ಬಣ್ಣಿಸಿದ್ದಾರೆ.

‘‘ಈ ಬೆಳವಣಿಗೆಗಳು ಅಮೆರಿಕ ದುರ್ಬಲವಾಗಿ ಬಿಂಬಿಸಿವೆ’’ ಎಂದು ಟೆನೆಸಿಯ ರಿಪಬ್ಲಿಕನ್ ಸೆನೆಟರ್ ಬಾಬ್ ಕಾರ್ಕರ್ ಹೇಳಿದ್ದಾರೆ.

ಫಿನ್‌ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ಸೋಮವಾರ ಟ್ರಂಪ್ ಮತ್ತು ಪುಟಿನ್ ನಡುವೆ ಶೃಂಗ ಸಮ್ಮೇಳನ ನಡೆದಿರುವುದನ್ನು ಸ್ಮರಿಸಬಹುದಾಗಿದೆ.

ಹೀಗೆ ಮಾಡಲು ರಶ್ಯಕ್ಕೆ ಕಾರಣಗಳಿಲ್ಲ

ಸೋಮವಾರ ಶೃಂಗ ಸಮ್ಮೇಳನದಲ್ಲಿ ಪುಟಿನ್ ಪರವಾಗಿ ನಿಂತ ಟ್ರಂಪ್, ಅವರೊಂದಿಗೆ ಯಾವುದೇ ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲಿಲ್ಲ. ಬದಲಿಗೆ ಅವರು ಅಮೆರಿಕ ಗುಪ್ತಚರ ಸಂಸ್ಥೆಗಳು ಮತ್ತು ಕಳೆದ ವಾರ 12 ರಶ್ಯನ್ನರ ವಿರುದ್ಧ ಅಮೆರಿಕ ಹೊರಿಸಿದ ಆರೋಪಪಟ್ಟಿಯನ್ನೇ ಪ್ರಶ್ನಿಸಿದರು.

‘‘ನನ್ನ ಗುಪ್ತಚರ ತಂಡದ ಬಗ್ಗೆ ನನಗೆ ಅಗಾಧ ವಿಶ್ವಾಸವಿದೆ. ಆದರೆ, ಅಧ್ಯಕ್ಷ ಪುಟಿನ್ ರಶ್ಯದ ವಿರುದ್ಧದ ಆರೋಪಗಳನ್ನು ಅತ್ಯಂತ ಆತ್ಮವಿಶ್ವಾಸದಿಂದ ನಿರಾಕರಿಸಿದ್ದಾರೆ’’ ಎಂದು ಟ್ರಂಪ್ ಹೇಳಿದರು.

‘‘ಅದನ್ನು ರಶ್ಯ ಮಾಡಲಿಲ್ಲ ಎಂದು ಅವರು ಹೇಳಿದರು. ನನಗೂ ಅನಿಸುತ್ತದೆ: ರಶ್ಯ ಯಾಕೆ ಹೀಗೆ ಮಾಡುತ್ತದೆ? ಹೀಗೆ ಮಾಡಲು ಅದಕ್ಕೇನೂ ಕಾರಣಗಳಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News