ರಾಣಿ ಎಲಿಝಬೆತ್ ಬಗ್ಗೆ ಹೇಳಿಕೆ ನೀಡಿ ನಗೆಪಾಟಲಿಗೀಡಾದ ಟ್ರಂಪ್

Update: 2018-07-18 18:32 GMT

ವಾಶಿಂಗ್ಟನ್, ಜು. 18: ತನ್ನ ಬ್ರಿಟನ್ ಭೇಟಿಯಿಂದಾಗಿ ರಾಣಿ ದ್ವಿತೀಯ ಎಲಿಝಬೆತ್ 70 ವರ್ಷಗಳಲ್ಲಿ ಮೊದಲ ಬಾರಿಗೆ ಗೌರವ ರಕ್ಷೆಯನ್ನು ಸ್ವೀಕರಿಸುವಂತಾಯಿತು ಎಂದು ಹೇಳುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಗೆಪಾಟಲಿಗೀಡಾಗಿದ್ದಾರೆ.

ವಾಸ್ತವಿಕವಾಗಿ, ವರ್ಷದಲ್ಲಿ ಹಲವು ಬಾರಿ ರಾಣಿ ಗೌರವ ರಕ್ಷೆ ಸ್ವೀಕರಿಸುತ್ತಾರೆ. ಅದೂ ಅಲ್ಲದೆ, ವಿದೇಶಗಳ ಸರಕಾರಿ ಮುಖ್ಯಸ್ಥರ ಭೇಟಿಯಂಥ ಮಹತ್ವದ ಸಂದರ್ಭಗಳಲ್ಲಿ ಅವರು ನಿಯಮಿತವಾಗಿ ಗೌರವರಕ್ಷೆ ಸ್ವೀಕರಿಸುತ್ತಾರೆ.

‘‘ಇದು ಸಂಪೂರ್ಣ ಊಹಾತ್ಮಕ ಹೇಳಿಕೆ’’ ಎಂಬುದಾಗಿ ಬ್ರಿಟನ್ ಅರಮನೆಯ ವಕ್ತಾರ ರಿಚರ್ಡ್ ಫಿಟ್ಝ್‌ವಿಲಿಯಮ್ಸ್’’ ‘ದಿ ಇಂಡಿಪೆಂಡೆಂಟ್’ಗೆ ಹೇಳಿದರು.

ಕಳೆದ ವಾರ ಅಮೆರಿಕದ ಅಧ್ಯಕ್ಷರಾಗಿ ಬ್ರಿಟನ್‌ಗೆ ಮೊದಲ ಭೇಟಿ ನೀಡಿದ ಟ್ರಂಪ್, ವಿಂಡ್ಸರ್ ಕ್ಯಾಸಲ್ ಅರಮನೆಯಲ್ಲಿ ರಾಣಿ ದ್ವಿತೀಯ ಎಲಿಝಬೆತ್‌ರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಗೌರವ ರಕ್ಷೆಯ ಗೌರವವನ್ನು ನೀಡಲಾಗಿತ್ತು.

ಗೌರವ ರಕ್ಷೆ ಸ್ವೀಕಾರ ಸಂದರ್ಭದಲ್ಲಿ ಟ್ರಂಪ್ ರಾಣಿಗಿಂತ ಮುಂದೆ ನಡೆಯುವ ಮೂಲಕ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದೂ ವಿವಾದಕ್ಕೆ ಕಾರಣವಾಗಿತ್ತು.

ಈಗ, ಮಂಗಳವಾರ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಟ್ರಂಪ್, ತನಗೆ ನೀಡಲಾದ ಗೌರವ ರಕ್ಷೆಯು ದಶಕಗಳ ಅವಧಿಯಲ್ಲೇ ಮೊದಲನೆಯದಾಗಿತ್ತು ಎಂದು ಹೇಳಿಕೊಂಡಿದ್ದಾರೆ.

‘‘ನಾವು ರಾಣಿಯನ್ನು ಭೇಟಿಯಾದೆವು. ಅವರು ಅಮೋಘ ವ್ಯಕ್ತಿ. 70 ವರ್ಷಗಳಲ್ಲೇ ಮೊದಲ ಬಾರಿಗೆ ರಾಣಿ ಗೌರವ ರಕ್ಷೆಯನ್ನು ಸ್ವೀಕರಿಸಿದರು’’ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News