ಗೂಗಲ್‌ಗೆ 34,257 ಕೋಟಿ ರೂ. ದಂಡ

Update: 2018-07-18 18:15 GMT

  ನ್ಯೂಯಾರ್ಕ್, ಜು. 18: ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲಿ ತನ್ನ ಆ್ಯಪ್‌ಗಳನ್ನು ‘ತುರುಕಿಸುತ್ತಿರುವುದಕ್ಕಾಗಿ’ ಅಮೆರಿಕದ ಇಂಟರ್‌ನೆಟ್ ದೈತ್ಯ ಗೂಗಲ್‌ಗೆ ಐರೋಪ್ಯ ಒಕ್ಕೂಟ 5 ಬಿಲಿಯ ಡಾಲರ್ (ಸುಮಾರುಇ 34,257 ಕೋಟಿ ರೂಪಾಯಿ) ಮೊತ್ತದ ಅಗಾಧ ದಂಡ ವಿಧಿಸಿದೆ. ಅದೇ ವೇಳೆ, ಆ್ಯಂಡ್ರಾಯ್ಡ್ ಮೊಬೈಲ್ ಫೋನ್‌ಗಳಲ್ಲಿ ಶೋಧ ಮತ್ತು ವೆಬ್ ಬ್ರೌಸರ್ ಆ್ಯಪ್‌ಗಳನ್ನು ಅಳವಡಿಸುವ ರೀತಿಯನ್ನು ಬದಲಾಯಿಸುವಂತೆ ಅದು ಗೂಗಲ್‌ಗೆ ಆದೇಶ ನೀಡಿದೆ.

ಮೊಬೈಲ್ ಬಳಕೆದಾರರಿಗೆ ಗೂಗಲ್ ಉತ್ಪನ್ನಗಳನ್ನು ತಲುಪಿಸುವುದಕ್ಕಾಗಿ ಮೊಬೈಲ್ ಫೋನ್ ತಯಾರಿಕಾ ಕಂಪೆನಿಗಳೊಂದಿಗೆ ‘ಅಕ್ರಮ ಒಪ್ಪಂದ’ಗಳನ್ನು ಮಾಡಿಕೊಳ್ಳುವುದನ್ನು ನಿಲ್ಲಿಸಲು ಐರೋಪ್ಯ ಒಕ್ಕೂಟ 90 ದಿನಗಳನ್ನು ಗೂಗಲ್‌ಗೆ ನೀಡಿದೆ.

‘‘ಗೂಗಲ್ ತನ್ನ ಸರ್ಚ್ ಇಂಜಿನ್‌ನ ಪ್ರಾಬಲ್ಯವನ್ನು ಭದ್ರಪಡಿಸಲು ಆ್ಯಂಡ್ರಾಯ್ಡನ್ನು ಬಳಸಿಕೊಳ್ಳುತ್ತಿದೆ’’ ಎಂದು ಐರೋಪ್ಯ ಒಕ್ಕೂಟದ ಕಾಂಪಿಟೀಶನ್ ಕಮಿಶನರ್ ಮಾರ್ಗರೆಟ್ ವೆಸ್ಟಜರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ಇಂಥ ಕ್ರಮಗಳು ಎದುರಾಳಿ ಕಂಪೆನಿಗಳಿಗೆ ಸಾಮರ್ಥ್ಯದ ಆಧಾರದಲ್ಲಿ ಸ್ಪರ್ಧೆ ನೀಡುವ ಅವಕಾಶವನ್ನು ನಿರಾಕರಿಸಿವೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News