ನನ್ನ ಗುಪ್ತಚರ ಸಂಸ್ಥೆಗಳ ವರದಿಗಳನ್ನು ನಂಬುವೆ: ಟ್ರಂಪ್

Update: 2018-07-18 18:05 GMT

ವಾಶಿಂಗ್ಟನ್, ಜು. 18: ಸ್ನೇಹಿತರು ಮತ್ತು ವಿರೋಧಿಗಳಿಬ್ಬರಿಂದಲೂ ಟೀಕೆಗಳನ್ನು ಎದುರಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೆಲ್ಸಿಂಕಿಯಲ್ಲಿ ನೀಡಿದ ಹೇಳಿಕೆಯಿಂದ ಮಂಗಳವಾರ ಹಿಂದೆ ಸರಿದಿದ್ದಾರೆ.

ತನ್ನ ಗುಪ್ತಚರ ಸಂಸ್ಥೆಗಳ ಬಗ್ಗೆ ತನಗೆ ‘ಪೂರ್ಣ ವಿಶ್ವಾಸವಿದೆ’ ಎಂದು ಹೇಳಿರುವ ಅವರು, 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿತ್ತು ಎಂಬ ಅವುಗಳ ನಿರ್ಧಾರವನ್ನು ತಾನು ಪದೇ ಪದೇ ಸ್ವೀಕರಿಸಿದ್ದೇನೆ ಎಂದು ಹೇಳಿದರು.

‘‘ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಾನು ಬಾಯ್ತಪ್ಪಿನಿಂದ ಮಾತನಾಡಿದೆ’’ ಟ್ರಂಪ್ ಹೇಳಿದರು.

ಚುನಾವಣೆಗಳಲ್ಲಿ ರಶ್ಯ ಹಸ್ತಕ್ಷೇಪ ನಡೆಸಿರುವುದಕ್ಕೆ ಸಂಬಂಧಿಸಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿರುವ ವರದಿಗಳನ್ನು ತಾವು ನಂಬುವಿರೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘‘ನನ್ನ ಜನರು ನಾನಿದ್ದಲ್ಲಿಗೆ ಬಂದರು. ಇದರ ಹಿಂದೆ ರಶ್ಯ ಇದೆ ಎನ್ನುವುದು ತಮ್ಮ ಭಾವನೆ ಎಂದು ಹೇಳಿದರು. ನಾನು ಇದನ್ನು ಅಧ್ಯಕ್ಷ ಪುಟಿನ್ ಜೊತೆ ಪ್ರಸ್ತಾಪಿಸಿದೆ. ಆದರೆ ಅದನ್ನು ರಶ್ಯ ಮಾಡಿಲ್ಲ ಎಂದು ಅವರು ಹೇಳಿದರು. ರಶ್ಯ ಯಾಕೆ ಹೀಗೆ ಮಾಡಬೇಕು ಎನ್ನುವುದಕ್ಕೆ ಕಾರಣವೂ ಇಲ್ಲ’’ ಎಂದು ಹೆಲ್ಸಿಂಕಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದರು.

ಮಂಗಳವಾರ ಹೇಳಿಕೆಯೊಂದನ್ನು ನೀಡಿದ ಅವರು, ‘‘ ‘ಅದು (ರಶ್ಯ) ಯಾಕೆ (ಹಸ್ತಕ್ಷೇಪ) ಮಾಡಬಾರದು ಎನ್ನುವುದಕ್ಕೆ ಕಾರಣವಿಲ್ಲ’ ಎಂಬುದಾಗಿ ನಾನು ಹೇಳಬೇಕಾಗಿತ್ತು. ಆದರೆ ಬಾಯ್ತಪ್ಪಿನಿಂದ ತಪ್ಪಾಗಿ ಹೇಳಿದೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News