ಚುನಾವಣಾ ಹಸ್ತಕ್ಷೇಪಕ್ಕೆ ಸ್ವತಃ ಪುಟಿನ್ ಜವಾಬ್ದಾರಿ: ಟ್ರಂಪ್

Update: 2018-07-19 15:50 GMT

ವಾಶಿಂಗ್ಟನ್, ಜು. 19: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿರುವ ಹಸ್ತಕ್ಷೇಪಕ್ಕೆ ಸ್ವತಃ ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜವಾಬ್ದಾರರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ಸಿಬಿಎಸ್ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಅದೇ ವೇಳೆ, ಹೆಲ್ಸಿಂಕಿಯಲ್ಲಿ ಸೋಮವಾರ ನಡೆದ ಟ್ರಂಪ್ ಮತ್ತು ಪುಟಿನ್ ನಡುವಿನ ಶೃಂಗಸಭೆಯ ಬಳಿಕ ಟ್ರಂಪ್ ನೀಡಿರುವ ಇನ್ನೊಂದು ವಿವಾದಾತ್ಮಕ ಹೇಳಿಕೆಗೆ ಅವರ ಬೆಂಬಲಿಗರು ಸ್ಪಷ್ಟೀಕರಣ ನೀಡಿದ್ದಾರೆ.

‘ಇನ್ನೆಂದೂ ರಶ್ಯ ಅಮೆರಿಕಕ್ಕೆ ಹಾನಿ ಮಾಡುವುದಿಲ್ಲ’ ಎಂಬುದಾಗಿ ಟ್ರಂಪ್ ಹೇಳಿದ್ದರೆಂದು ವರದಿಯಾಗಿತ್ತು. ಆದರೆ, ಈ ಹೇಳಿಕೆಯನ್ನು ಟ್ರಂಪ್ ನೀಡಿಲ್ಲ ಎಂದು ಅವರ ಬೆಂಬಲಿಗರು ಹೇಳಿಕೊಂಡಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿದೆಯೆನ್ನಲಾದ ಹಸ್ತಕ್ಷೇಪವನ್ನು ದೃಢೀಕರಿಸಿ ಅಮೆರಿಕದ ಗುಪ್ತಚರ ಸಂಸ್ಥೆಗಳು ವರದಿಗಳನ್ನು ನೀಡಿರುವ ಹೊರತಾಗಿಯೂ, ಈ ವರದಿಗಳನ್ನು ನಂಬದೆ, ‘ರಶ್ಯ ಹಾಗೆ ಮಾಡಿಲ್ಲ’ ಎಂಬ ಆ ದೇಶದ ಅಧ್ಯಕ್ಷರ ನಿರಾಕರಣೆಯನ್ನು ನಂಬುವುದಾಗಿ ಶೃಂಗ ಸಮ್ಮೇಳನದ ವೇಳೆ ಟ್ರಂಪ್ ಹೇಳಿದ್ದರು. ಇದು ಅಮೆರಿಕದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಇದಕ್ಕೂ ಮುನ್ನ, ಅಮೆರಿಕದ ಮೇಲೆ ರಶ್ಯದ ಬೆದರಿಕೆ ಮುಂದುವರಿದಿದೆ ಎಂಬುದಾಗಿ ಅಮೆರಿಕ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಡ್ಯಾನ್ ಕೋಟ್ ಹೇಳಿದ್ದರು.

ಟ್ರಂಪ್ ಹೇಳಿಕೆ ಗುಪ್ತಚರ ಸಂಸ್ಥೆಯ ಮುಖ್ಯಸ್ಥರ ಹೇಳಿಕೆಗೆ ನೇರ ಸವಾಲಾಗಿದೆ ಎಂಬುದಾಗಿ ಭಾವಿಸಲಾಗಿತ್ತು.

ಪುಟಿನ್ ಪರವಾಗಿ ನಿಂತಿದ್ದ ಟ್ರಂಪ್!

ಫಿನ್‌ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ನಡೆದ ಶೃಂಗ ಸಮ್ಮೇಳನದ ಬಳಿಕ ಏರ್ಪಡಿಸಲಾದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹಲವರ ಹುಬ್ಬೇರಿಸಿದ್ದರು.

ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿರುವುದನ್ನು ತನ್ನದೇ ಗುಪ್ತಚರ ಸಂಸ್ಥೆಗಳು ದೃಢಪಡಿಸಿದ್ದರೂ, ಟ್ರಂಪ್, ಪುಟಿನ್ ಪರವಾಗಿ ನಿಂತಂತೆ ಕಂಡುಬಂದರು.

ರಶ್ಯ ಹಸ್ತಕ್ಷೇಪ ನಡೆಸಿಲ್ಲ ಎಂಬುದಾಗಿ ಪುಟಿನ್ ಹೇಳಿದಾಗ, ಅದಕ್ಕೆ ಹಸ್ತಕ್ಷೇಪ ನಡೆಸಲು ಕಾರಣಗಳಿಲ್ಲ ಎಂದು ಟ್ರಂಪ್ ಹೇಳಿದ್ದರು.

ಇದು ಅಮೆರಿಕನ್ನರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News