ಭಾರತ, ಚೀನಾಗಳ ಪ್ರತೀಕಾರಾತ್ಮಕ ತೆರಿಗೆಯಿಂದ ಅಮೆರಿಕಕ್ಕೆ ಪೆಟ್ಟು: ಅಮೆರಿಕ ಸಂಸದ ಡೇವ್ ರೀಚರ್ಟ್

Update: 2018-07-19 15:52 GMT

ವಾಶಿಂಗ್ಟನ್, ಜು. 19: ಭಾರತ ಮತ್ತು ಚೀನಾಗಳು ಅಮೆರಿಕದ ಉತ್ಪನ್ನಗಳ ಆಮದಿನ ಮೇಲೆ ವಿಧಿಸಿರುವ ಪ್ರತೀಕಾರಾತ್ಮಕ ತೆರಿಗೆಗಳು ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿವೆ ಎಂಬುದಾಗಿ ಅಮೆರಿಕದ ಪ್ರಭಾವಿ ಸಂಸದರೊಬ್ಬರು ಗುರುವಾರ ಹೇಳಿದ್ದಾರೆ ಹಾಗೂ ಅಮೆರಿಕದ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಟ್ರಂಪ್ ಆಡಳಿತವನ್ನು ಒತ್ತಾಯಿಸಿದ್ದಾರೆ.

ಟ್ರಂಪ್ ಆಡಳಿತವು ಮಾರ್ಚ್‌ನಲ್ಲಿ ಅಲ್ಯುಮಿನಿಯಮ್ ಮತ್ತು ಉಕ್ಕು ಆಮದುಗಳ ಮೇಲೆ ಹೆಚ್ಚುವರಿ ತೆರಿಗೆಗಳನ್ನು ವಿಧಿಸಿತ್ತು. ಇದು ಚೀನಾ ಸೇರಿದಂತೆ ಹಲವು ದೇಶಗಳೊಂದಿಗೆ ಅಮೆರಿಕದ ವ್ಯಾಪಾರ ಸಮರಕ್ಕೆ ಕಾರಣವಾಯಿತು.

ಎಪ್ರಿಲ್‌ನಲ್ಲಿ ಟ್ರಂಪ್ ಇನ್ನೂ ಸುಮಾರು 1,300 ಚೀನಾ ಉತ್ಪನ್ನಗಳ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸಿದರು ಹಾಗೂ ಇನ್ನಷ್ಟು ವಸ್ತುಗಳ ಮೇಲೆ ಆಮದು ಸುಂಕ ವಿಧಿಸುವ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ಚೀನಾ ಅಮೆರಿಕದಿಂದ ಆಮದು ಮಾಡಲಾಗುವ ಉತ್ಪನ್ನಗಳ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸಿತು.

ಕಳೆದ ತಿಂಗಳು ಭಾರತ 30 ವಸ್ತುಗಳ ಪರಿಷ್ಕೃತ ಪಟ್ಟಿಯೊಂದನ್ನು ಡಬ್ಲುಟಿಒಗೆ ಸಲ್ಲಿಸಿ, ಅವುಗಳ ಆಮದು ಸುಂಕವನ್ನು 50 ಶೇಕಡದಷ್ಟು ಹೆಚ್ಚಿಸುವ ಪ್ರಸ್ತಾಪವಿದೆ ಎಂದು ಹೇಳಿತ್ತು. ಈ ವಸ್ತುಗಳಲ್ಲಿ ಮೋಟರ್‌ಸೈಕಲ್, ನಿರ್ದಿಷ್ಟ ಕಬ್ಬಿಣ ಮತ್ತು ಉಕ್ಕಿನ ಸಲಕರಣೆಗಳು, ಬೋರಿಕ್ ಆ್ಯಸಿಡ್ ಮತ್ತು ಅಲಸಂಡೆ ಸೇರಿವೆ.

ಅಮೆರಿಕದ ರೈತರ ಮೇಲೆ ಮೊದಲ ಪರಿಣಾಮ

ಅಮೆರಿಕದ ರೈತರು, ಪ್ರಾಣಿಗಳ ಸಾಕಣೆದಾರರು ಮತ್ತು ಬೆಳೆಗಾರರು ಈಗ ಅಂತಾರಾಷ್ಟ್ರೀಯ ವ್ಯಾಪಾರ ಸಮರದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಸಂಸದ ಹಾಗೂ ಉಪಸಮಿತಿಯೊಂದರ ಅಧ್ಯಕ್ಷ ಡೇವ್ ರೀಚರ್ಟ್ ಹೇಳಿದ್ದಾರೆ.

 ‘ಅಮೆರಿಕದ ಕೃಷಿ ಮತ್ತು ಗ್ರಾಮೀಣ ಸಮುದಾಯಗಳ ಮೇಲೆ ಆಮದು ಸುಂಕಗಳ ಪರಿಣಾಮ’ ಎಂಬ ವಿಷಯದಲ್ಲಿ ಅಮೆರಿಕದ ಸಂಸತ್ ಕಾಂಗ್ರೆಸ್‌ಗೆ ಅವರು ವಿವರಣೆ ನೀಡುತ್ತಿದ್ದರು.

‘‘ಅಮೆರಿಕದ ನೂತನ ವ್ಯಾಪಾರ ನೀತಿಗಳಿಗೆ ಜಗತ್ತಿನಾದ್ಯಂತ ದೇಶಗಳು ಪ್ರತಿಕ್ರಿಯಿಸುತ್ತಿವೆ. ಪ್ರತೀಕಾರಾತ್ಮಕ ತೆರಿಗೆಗಳ ಪರಿಣಾಮವನ್ನು ಮೊದಲು ಎದುರಿಸುವವರು ರೈತರೇ ಆಗಿದ್ದಾರೆ. ಐರೋಪ್ಯ ಒಕ್ಕೂಟ, ಚೀನಾ, ಮೆಕ್ಸಿಕೊ, ಕೆನಡ, ಟರ್ಕಿ, ರಶ್ಯ ಮತ್ತು ಭಾರತ ಮುಂತಾದ ದೇಶಗಳಿಂದ ಅಮೆರಿಕದ ಕೃಷಿ ಕ್ಷೇತ್ರವು ಪತೀಕಾರಾತ್ಮಕ ತೆರಿಗೆಗಳ ಬೆದರಿಕೆಯನ್ನು ಎದುರಿಸುತ್ತಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News