ಶರೀಫ್‌ಗೆ ಜೈಲಿನಲ್ಲಿ ಎಲ್ಲ ಸೌಲಭ್ಯ: ಸರಕಾರ

Update: 2018-07-19 15:55 GMT

ಇಸ್ಲಾಮಾಬಾದ್, ಜು. 19: ಜೈಲಿನಲ್ಲಿರುವ ಮಾಜಿ ಪ್ರಧಾನಿ ನವಾಝ್ ಶರೀಫ್‌ಗೆ ಕಾನೂನು ಪ್ರಕಾರ ಯಾವುದೆಲ್ಲ ಸೌಲಭ್ಯಗಳು ಸಿಗಬೇಕಾಗಿವೆಯೋ ಅವುಗಳೆಲ್ಲ ಸಿಗುತ್ತಿವೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತದ ಸರಕಾರ ಗುರುವಾರ ಹೇಳಿದೆ.

ತನ್ನ ಅಣ್ಣನಿಗೆ ಅಡಿಯಾಲ ಜೈಲಿನಲ್ಲಿ ‘ಕಳಪೆ ಸೌಲಭ್ಯ’ಗಳನ್ನು ಕೊಡಲಾಗುತ್ತಿದೆ ಎಂಬುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಹಾಗೂ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷ ಶಹಬಾಝ್ ಶರೀಫ್ ದೂರಿದ ಬಳಿಕ ಸರಕಾರ ಈ ಸ್ಪಷ್ಟೀಕರಣ ನೀಡಿದೆ.

ಅವರು ಯಾವುದೆಲ್ಲ ಸೌಲಭ್ಯಗಳಿಗೆ ಅರ್ಹರಾಗಿದ್ದಾರೋ, ಅವುಗಳೆಲ್ಲವನ್ನು ನೀಡಲಾಗುತ್ತಿದೆ ಎಂದು ಪಂಜಾಬ್ ವಾರ್ತಾ ಸಚಿವ ಅಹ್ಮದ್ ವಕಾಸ್ ರಿಯಾಝ್ ಮಾಧ್ಯಮಗಳಿಗೆ ಹೇಳಿದರು.

ಅದೇ ವೇಳೆ, ಶರೀಫ್‌ಗೆ ಕೊಡಲಾಗುತ್ತಿರುವ ಸೌಲಭ್ಯಗಳ ಪಟ್ಟಿಯೊಂದನ್ನು ಜೈಲು ಉಪಮಹಾನಿರ್ದೇಶಕ ಮಲಿಕ್ ಮುಬಶಿರ್ ಬಿಡುಗಡೆ ಮಾಡಿದರು.

‘‘ಶರೀಫ್‌ರನ್ನು ಜೈಲಿನ ಉತ್ತಮ ದರ್ಜೆಯ ಭಾಗದಲ್ಲಿ ಪ್ರತ್ಯೇಕ ಸೆಲ್‌ನಲ್ಲಿ ಇಡಲಾಗಿದೆ. ಅವರಿಗೆ ಉಕ್ಕಿನ ಮಂಚ, ಮೇಜು, ಕುರ್ಚಿ, ಪತ್ರಿಕೆಗಳು, ಅವರ ವೈಯಕ್ತಿಕ ಮಂಚಕ್ಕೆ ಹೊದಿಕೆಗಳು, ವೈಯಕ್ತಿಕ ಬಟ್ಟೆಗಳು, ಒಂದು ಸೀಲಿಂಗ್ ಫ್ಯಾನ್, ಎರಡು ಬ್ರಾಕೆಟ್ ಫ್ಯಾನ್‌ಗಳು ಮತ್ತು ಶೌಚ ಉಪಕರಣಗಳನ್ನು ಒದಗಿಸಲಾಗಿದೆ. 21 ಇಂಚು ಗಾತ್ರದ ಟಿವಿಯನ್ನು ಇಡಲು ಅವರಿಗೆ ಅವಕಾಶ ನೀಡಲಾಗಿದೆ’’ ಎಂದು ಮುಬಶಿರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News