ರೊಹಿಂಗ್ಯಾ ವಿರುದ್ಧ ಹಿಂಸಾಚಾರಕ್ಕೆ ಪೂರ್ವ ಸಿದ್ಧತೆ ಮಾಡಿದ್ದ ಮ್ಯಾನ್ಮಾರ್ ಸೇನೆ: ಮಾನವಹಕ್ಕು ಸಂಘಟನೆ ವರದಿ

Update: 2018-07-19 16:03 GMT

ಬ್ಯಾಂಕಾಕ್ (ಥಾಯ್ಲೆಂಡ್), ಜು. 19: ರೊಹಿಂಗ್ಯಾ ಮುಸ್ಲಿಮರ ವಿರುದ್ಧದ ಹಿಂಸಾಚಾರಕ್ಕೆ ಮ್ಯಾನ್ಮಾರ್ ಸೇನೆ ಮುಂಚಿತ ಸಿದ್ಧತೆಗಳನ್ನು ನಡೆಸಿರುವುದನ್ನು ಮಾನವಹಕ್ಕುಗಳ ಸಂಘಟನೆಯೊಂದು ಪತ್ತೆಹಚ್ಚಿದೆ.

ಮ್ಯಾನ್ಮಾರ್ ಸೇನೆಯು 2016ರಲ್ಲೇ ರೊಹಿಂಗ್ಯಾ ಕುಟುಂಬಗಳಿಂದ ಚೂರಿಗಳು ಮತ್ತು ಇತರ ಹರಿತ ಅಲಗಿನ ಉಪಕರಣಗಳನ್ನು ರೊಹಿಂಗ್ಯಾ ಮುಸ್ಲಿಮರಿಂದ ವಶಪಡಿಸಿಕೊಂಡಿತ್ತು ಹಾಗೂ ತಮ್ಮ ಮನೆಗಳ ಸುತ್ತಲಿನ ರಕ್ಷಣಾ ಬೇಲಿಗಳನ್ನು ತೆರವುಗೊಳಿಸುವಂತೆ ಅವರ ಮೇಲೆ ಒತ್ತಡ ಹೇರಿತ್ತು ಎನ್ನುವುದನ್ನು ತಾನು ಪತ್ತೆಹಚ್ಚಿರುವುದಾಗಿ ‘ಫೋರ್ಟಿ ರೈಟ್ಸ್’ ಎಂಬ ಸಂಘಟನೆ ಹೇಳಿದೆ.

 ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ವಾಸಿಸುತ್ತಿರುವ ಮುಸ್ಲಿಮೇತರ ನಾಗರಿಕರಿಗೆ ಸೇನೆಯು ತರಬೇತಿ ನೀಡಿತು ಹಾಗೂ ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿತು. ಬಳಿಕ ಅವರು ರೊಹಿಂಗ್ಯಾ ವಿರುದ್ಧದ ಹಿಂಸಾಚಾರದಲ್ಲಿ ಪಾಲ್ಗೊಂಡರು ಎಂದು ವರದಿ ಹೇಳಿದೆ.

2017 ಆಗಸ್ಟ್‌ನಲ್ಲಿ ರೊಹಿಂಗ್ಯಾ ಬಂಡುಕೋರರು ಸೇನೆ ಮತ್ತು ಪೊಲೀಸ್ ಠಾಣೆಗಳ ಮೇಲೆ ನಡೆಸಿದ ದಾಳಿಗೂ ಮುಂಚೆ ಈ ಸಿದ್ಧತೆಗಳನ್ನು ಮಾಡಲಾಗಿತ್ತು ಎಂದು ಅದು ತಿಳಿಸಿದೆ.

ಈ ದಾಳಿಯ ಬಳಿಕ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಭಾರೀ ಪ್ರಮಾಣದಲ್ಲಿ ದೌರ್ಜನ್ಯ, ಅತ್ಯಾಚಾರ ಹಾಗೂ ಹತ್ಯಾಕಾಂಡ ನಡೆಯಿತು. ಮ್ಯಾನ್ಮಾರ್ ಸೈನಿಕರು ಮತ್ತು ಬೌದ್ಧ ನಾಗರಿಕರು ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಅಮಾನುಷ ಹಿಂಸೆಯನ್ನು ಛೂಬಿಟ್ಟರು. ಇದರ ಪರಿಣಾಮವಾಗಿ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದರು.

ಈ ಹಿಂಸಾಚಾರವನ್ನು ವಿಶ್ವಸಂಸ್ಥೆಯು ‘ಮ್ಯಾನ್ಮಾರ್ ಸರಕಾರ ನಡೆಸಿದ ‘ಜನಾಂಗೀಯ ನಿರ್ಮೂಲನೆ’ ಎಂಬುದಾಗಿ ಬಣ್ಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News